ಕಂಗ್ರಾಡ್ಸ್ ಮೇಡಂ.. ಪ್ರಿಯಾಂಕ ಗಾಂಧಿಗೆ ಬೊಕೆ ನೀಡಿ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ
ದೆಹಲಿ , ಶುಕ್ರವಾರ, 29 ನವೆಂಬರ್ 2024 (14:54 IST)
ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಯನಾಡು ಸಂಸದೆ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಿದರು.
ಸಂಸತ್ತಿನ ಪ್ರತಿಪಕ್ಷ ನಾಯಕರ ಕಚೇರಿಯಲ್ಲಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. ಇದೇ ವೇಳೆ ಸಿದ್ದರಾಮಯ್ಯ ಅವರು ವಯನಾಡು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಪ್ರಿಯಾಂಕ ಗಾಂಧಿ ಅವರನ್ನು ಅಭಿನಂದಿಸಿದರು. ನಿನ್ನೆಯಷ್ಟೇ ಪ್ರಿಯಾಂಕ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ವಿಧಾನಸಭೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಅಭಿನಂದನೆ ತಿಳಿಸಿದರು. ಇದಾದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿ ಮಾಡಿ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಒಂದೆಡೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಗಳಾಗುತ್ತಿವೆ. ಇದರ ನಡುವೆ ಸಿಎಂ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ. ರಾಜಕೀಯದ ಜೊತೆಗೆ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದ ಸಿಎಂ ದೆಹಲಿಗೆ ತೆರಳಿದ್ದರು.
ಮುಂದಿನ ಸುದ್ದಿ