ನವದೆಹಲಿ: ಸಿಎಂ ಸಿದ್ದರಾಮಯ್ಯ ನಾಳೆ ದಿಡೀರ್ ಆಗಿ ದೆಹಲಿಗೆ ಭೇಟಿ ನೀಡಲಿದ್ದು ನಾಳೆ ಅಲ್ಲಿಯೇ ವಾಸ್ತವ್ಯ ಹೂಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಭೇಟಿಯ ಉದ್ದೇಶವೇನು ಇಲ್ಲಿದೆ ವಿವರ.
ರಾಜ್ಯದಲ್ಲಿ ಉಪಚುನಾವಣೆ ಬಳಿಕ ಸಂಪುಟ ಪುನರರಾಚನೆ ಬಗ್ಗೆ ಮಾತುಗಳು ಜೋರಾಗಿದೆ. ಕೆಲವು ಸಚಿವರಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ರಾಜ್ಯ ನಾಯಕರು ತೀರ್ಮಾನ ಮಾಡಿದ್ದಾರೆ. ಇದರ ಬಗ್ಗೆ ಹೈಕಮಾಂಡ್ ಬಳಿ ಚರ್ಚಿಸಲು ಸಿಎಂ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.
ಸಂಪುಟ ಪುನರರಾಚನೆಯಾಗಲಿದೆ ಎಂಬ ಸುದ್ದಿ ಬೆನ್ನಲ್ಲೇ ಹಲವು ಸಚಿವಾಕಾಂಕ್ಷಿಗಳು ಸಿಎಂ ಮುಂದೆ ತಮ್ಮ ಬೇಡಿಕೆಯಿಟ್ಟಿದ್ದಾರೆ. ಇಂದು ಚನ್ನಪಟ್ಟಣ ಶಾಸಕ ಸಿಪಿ ಯೋಗೇಶ್ವರ್ ಸಿಎಂ ನಿವಾಅಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಹಲವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಹೀಗಾಗಿ ರಾಜ್ಯ ನಾಯಕರು ಎಚ್ಚರಿಕೆಯ ಹೆಜ್ಜೆಯಿಡಲು ತೀರ್ಮಾನಿಸಿದ್ದಾರೆ.
ಈ ಕಾರಣಕ್ಕೆ ದೆಹಲಿಗೆ ತೆರಳಲಿರುವ ಸಿಎಂ ನಾಳೆ ಅಲ್ಲಿಯೇ ಉಳಿದುಕೊಂಡು ಶುಕ್ರವಾರದಂದು ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡಲಿದ್ದಾರೆ. ಕೇಂದ್ರ ಸಚಿವರ ಬಳಿ ರಾಜ್ಯದ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಮಾಡುವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಹಮ್ಮಿಕೊಂಡಿದ್ದಾರೆ.