Select Your Language

Notifications

webdunia
webdunia
webdunia
webdunia

ಬಿಜೆಪಿ ಸಮಾಜ ಒಡೆಯುತ್ತದೆ, ಕಾಂಗ್ರೆಸ್ ಒಂದುಗೂಡಿಸುತ್ತದೆ: ಡಿಸಿಎಂ ಡಿ.ಕೆ.ಶಿವಕುಮಾರ್

DK Shivakumar

Krishnaveni K

ಬೆಂಗಳೂರು , ಮಂಗಳವಾರ, 26 ನವೆಂಬರ್ 2024 (16:11 IST)
ಬೆಂಗಳೂರು: ಬಿಜೆಪಿಯವರು ಕತ್ತರಿಯಂತೆ ಸಮಾಜವನ್ನು ಇಬ್ಭಾಗ ಮಾಡುತ್ತಾರೆ. ಕಾಂಗ್ರೆಸ್ ಸೂಜಿಯಂತೆ ಸಮಾಜವನ್ನು ಪರಸ್ಪರ ಬೆಸೆಯುತ್ತದೆ. ಇದು ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
 
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ “ಭಾರತದ ಸಂವಿಧಾನ ಅಂಗೀಕಾರ ದಿನ” ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಂಗಳವಾರ ಭಾಗವಹಿಸಿ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು; 
 
"ನಾವು ಭಾರತ ಜೋಡೋ ಯಾತ್ರೆ ಮಾಡಿದ್ದು ಕೂಡ ದೇಶವನ್ನು ಒಟ್ಟಾಗಿಡುವ ಉದ್ದೇಶದಿಂದ. ಇಂದಿರಾ ಗಾಂಧಿ ಅವರು ಸಂವಿಧಾನದಲ್ಲಿ ಸಮಾಜವಾದ ಹಾಗೂ ಜಾತ್ಯಾತೀತ ತತ್ವ ಪದಗಳನ್ನು ಸೇರಿಸಿದ್ದರು. ಇದರ ವಿರುದ್ಧ ಅನೇಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಸೋಮವಾರವಷ್ಟೇ ಆದೇಶ ಹೊರಡಿಸಿದ್ದು, ಈ ಪದಗಳನ್ನು ಸಂವಿಧಾನದಿಂದ ತೆಗೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಸಂವಿಧಾನಕ್ಕೆ ಅಪಾಯವಿದೆ ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಪ್ರಬುದ್ಧವಾಗಿ ವಾದ ಮಂಡಿಸಿದ್ದಾರೆ.
 
ಕಬ್ಬಿಣದಲ್ಲಿ ಕತ್ತರಿಯನ್ನೂ ಮಾಡಬಹುದು, ಸೂಜಿಯನ್ನು ಮಾಡಬಹುದು. ಕತ್ತರಿ ಬಟ್ಟೆಯನ್ನು ಹರಿಯಲು ಬಳಸಿದರೆ, ಸೂಜಿಯನ್ನು ಬಟ್ಟೆ ಹೊಲಿಯಲು ಬಳಸಲಾಗುವುದು. ಕಾಂಗ್ರೆಸ್ ಪಕ್ಷ ದೇಶವನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದೆ."
 
ಸರ್ವರಿಗೂ ಸಮಬಾಳು, ಸಮಪಾಲು ನಮ್ಮ ಸಂವಿಧಾನದ ಮೂಲತತ್ವ
 
"ಸರ್ವರಿಗೂ ಸಮಬಾಳು, ಸಮಪಾಲು ನಮ್ಮ ಸಂವಿಧಾನದ ಮೂಲತತ್ವ. ಸಂವಿಧಾನದಲ್ಲಿ ಜಾತ್ಯಾತೀತ, ಸಮಾಜವಾದ ಪದ ತೆಗೆಯಲು ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಇಂಧಿರಾ ಗಾಂಧಿ ಅವರ ತೀರ್ಮಾನವನ್ನು ಯಾರೂ ಬದಲಿಸಲಾಗುವುದಿಲ್ಲ ಎಂಬುದಕ್ಕೆ ಸಾಕ್ಷಿ.
 
ನಾನು ನಂಬಿರುವ ಶಕ್ತಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂದು ತತ್ವ ನೀಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಪಕ್ಷ ನೀಡಿರುವ ಸಂವಿಧಾನದ ಮೂಲತತ್ವ ಎಲ್ಲಾ ಧರ್ಮದ ಆಚಾರ ವಿಚಾರವನ್ನು ಒಳಗೊಂಡಿದೆ. ಹೀಗಾಗಿ ನಮ್ಮ ಪಾಲಿಗೆ ಸಂವಿಧಾನ ಪವಿತ್ರವಾದ ಗ್ರಂಥವಾಗಿದೆ. 
 
ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೂಲ ಸಂವಿಧಾನದ ಪೀಠಿಕೆಯಾಗಿದೆ. ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದಾರೆ. ನೀನು ಹೋರಾಟ ಮಾಡದೇ ಇದ್ದರೂ ಮಾರಾಟವಾಗಬೇಡ ಎಂದಿದ್ದಾರೆ. ರಾಜಕಾರಣಿಗಳು ಮಾರಾಟವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ. 140 ಕೋಟಿ ಜನರ ರಕ್ಷಾ ಕವಚವೇ ಸಂವಿಧಾನ. ಇದನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಕೇಂದ್ರ ಮಂತ್ರಿಗಳು, ಸಂಸದರು ಹೇಳುತ್ತಿದ್ದರು. ಅದು ಎಂದಿಗೂ ಸಾಧ್ಯವಿಲ್ಲ.
 
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ. ಎಲ್ಲಾ ವರ್ಗದ ಜನರಿಗೆ ಕಾರ್ಯಕ್ರಮ ನೀಡುತ್ತದೆ. ಚಿಕ್ಕ ಮಕ್ಕಳಿಂದ, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಬಡವರು, ಮಧ್ಯಮ ವರ್ಗ ಸೇರಿದಂತೆ ಎಲ್ಲರಿಗೂ ಕಾರ್ಯಕ್ರಮ ನೀಡಿದ್ದೇವೆ. ನಮ್ಮ ಪಾಲಿನ ರಾಮಾಯಣ, ಭಗವದ್ಗೀತೆ, ಬೈಬಲ್ ಎಲ್ಲವೂ ಸಂವಿಧಾನ.
 
ನಮ್ಮ ದೇಶದಲ್ಲಿ ಮುಕ್ಕೋಟಿ ದೇವರನ್ನು ಪೂಜಿಸುತ್ತೇವೆ. ಸ್ವಾತಂತ್ರ್ಯ ಬಂದ ನಂತರ ನಾವು ಮಹಾತ್ಮಾ ಗಾಂಧಿ ಅವರನ್ನು ರಾಷ್ಟ್ರಪಿತ ಎಂದು ಕರೆದು, ಅವರಿಗೆ ಗೌರವ ನೀಡುತ್ತಿದ್ದೇವೆ. ಈ ಸಂವಿಧಾನ ಜಾರಿಯಾದ ನಂತರ ದೇಶದೆಲ್ಲೆಡೆ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಿ ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ರಾಮನ ತಂದೆ ದಶರಥ ಮಹಾರಾಜನ ದೇವಾಲಯವಿಲ್ಲ, ಆದರೆ ರಾಮನ ಭಂಟ ಹನುಮಂತನ ದೇವಾಲಯ ಹೆಚ್ಚಾಗಿದೆ. ಸೇವೆ ಮಾಡುವವರಿಗೆ ಸಮಾಜ ಗುರುತಿಸಲಿದೆ ಎಂಬುದಕ್ಕೆ ಇದೇ ಸಾಕ್ಷಿ.
 
ಪಕ್ಷದ ಇತಿಹಾಸವೇ ನಮ್ಮ ಶಕ್ತಿ:
 
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹದೇವಪ್ಪ ಅವರು ಸಮಾಜಕಲ್ಯಾಣ ಇಲಾಖೆ ಜವಾಬ್ದಾರಿ ವಹಿಸಿಕೊಂಡ  ನಂತರ ಶಾಲಾ ಮಕ್ಕಳಿಗೆ ಸಂವಿಧಾನ ಪೀಠಿಕೆ ಓದಿಸುವ ಕಾರ್ಯಕ್ರಮ ತಂದಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮಾಡುವಾಗ ಸಂವಿಧಾನ ಪೀಠಿಕೆ ಓದಿ, ಪ್ರತಿಜ್ಞೆ ತೆಗೆದುಕೊಂಡಿದ್ದೆ.
 
ಇಂತಿಹಾಸ ಮರೆತವ, ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಹೇಳಿದ್ದಾರೆ. ಕಾಂಗ್ರೆಸಿಗರಿಗೆ ಪಕ್ಷದ ಇತಿಹಾಸವೇ ದೊಡ್ಡ ಶಕ್ತಿ. ನಮಗೆ ಇರುವ ಇತಿಹಾಸ ಬೇರೆ ಯಾರಿಗೂ ಇಲ್ಲ. ಬಿಜೆಪಿಯವರಿಗೆ ನಮ್ಮ ರೀತಿ ತ್ಯಾಗ ಬಲಿದಾನದ ಇತಿಹಾಸವಿಲ್ಲ. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಕೂಡ ದೇಶಕ್ಕಾಗಿ 2 ಬಾರಿ ಪ್ರಧಾನಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಕಷ್ಟಕಾಲದಲ್ಲಿದ್ದಾಗ ನಮ್ಮ ಒತ್ತಾಯದ ಮೇರೆಗೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ನಂತರ 2 ಅವಧಿಗೆ ಯುಪಿಎ ಸರ್ಕಾರ ರಚಿಸಿ ದೇಶದ ಆರ್ಥಿಕ ತಜ್ಞನನ್ನು ಪ್ರಧಾನಮಂತ್ರಿಯನ್ನಾಗಿ ಮಾಡುತ್ತಾರೆ.  ರಾಹುಲ್ ಗಾಂಧಿ ಕೂಡ ಮಂತ್ರಿಯಾಗಬಹುದಿತ್ತು, ಪ್ರಧಾನಮಂತ್ರಿಯಾಗಬಹುದಿತ್ತು. ಅವರೂ ಕೂಡ ತ್ಯಾಗ ಮಾಡಿದ್ದಾರೆ.
 
ನೀನು ಸಿಖ್, ಜಾಟ್, ರಜಪೂತ ಯಾರೇ ಆಗಿರು, ಮೊದಲು ನೀನು ಭಾರತೀಯನಾಗಿರು ಎಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಹೇಳಿದ್ದಾರೆ. ಇಂದು ಏರ್ಪಡಿಸಿರುವ ಚರ್ಚಾ ಸ್ಪರ್ಧೆಯಲ್ಲಿ ಯುವಕರ ಅಭಿಪ್ರಾಯ ಸಲಹೆಗಳನ್ನು ಎಲ್ಲರೂ ಕೇಳಿ. ಇಂದಿನ ಪೀಳಿಗೆಯ ಯುವಕರು ಬಹಳ ಬುದ್ಧಿವಂತರಾಗಿದ್ದಾರೆ. ಕಾನೂನು ವಿಭಾಗದಲ್ಲಿ ಯುವಕರಿಗೆ ಆದ್ಯತೆ ನೀಡಲು ಈ ಕಾರ್ಯಕ್ರಮ ರೂಪಿಸಲಾಗಿದೆ. ನಮಗೆ ಹೋರಾಟಗಾರರು ಬೇಕು. ಕಾನೂನು ವಿಭಾಗದವರು ಕೂಡ ಹೋರಾಟಗಾರರಾಗಿರಬೇಕು.
 
ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನೂರು ವರ್ಷಗಳು ಪೂರೈಸಿದ್ದು, ಹೆಚ್.ಕೆ ಪಾಟೀಲ್ ಅವರು ಬೆಳಗಾವಿಯಲ್ಲಿ ಯಾವ ರೀತಿ ಕಾರ್ಯಕ್ರಮ ಮಾಡಬೇಕು ಎಂದು ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.”
 
ನನಗೆ ಬರುವ ನೋಟೀಸ್ ಓದಲು ಮಗನಿಗೆ ಕಾನೂನು ಓದಿಸುತ್ತಿದ್ದೇನೆ:
 
“ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ವಕೀಲನಾಗಬೇಕು ಎಂದು ಆಸೆ ಇತ್ತು. ಆ ಸಮಯದಲ್ಲಿ ನನಗೆ ಪಕ್ಷದ ವತಿಯಿಂದ ಟಿಕೆಟ್ ನೀಡಲಾಗಿತ್ತು. ದೇವರಾಜ ಅರಸು ಹಾಗೂ ಗುಂಡೂರಾವ್ ಅವರ ಕಾಲದಲ್ಲಿ ವಿದ್ಯಾರ್ಥಿ ನಾಯಕತ್ವಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ನಾನು ವಕೀಲನಾಗಲಿಲ್ಲ. ಆದರೆ ನನಗೀಗ ದಿನನಿತ್ಯ ಇಡಿ, ಆದಾಯ ತೆರಿಗೆ, ಸಿಬಿಐ ನೋಟೀಸ್ ಬರುತ್ತಿವೆ. ನನ್ನ ಕೈತುಂಬಾ ಈ ಸಂಸ್ಥೆಗಳ ನೋಟೀಸ್ ಗಳಿವೆ. ಈ ನೋಟೀಸ್ ಗಳನ್ನು ಓದಬೇಕು ಎಂಬ ಕಾರಣಕ್ಕೆ ನನ್ನ ಮಗನಿಗೆ ಕಾನೂನು ವ್ಯಾಸಂಗ ಮಾಡಿಸುತ್ತಿದ್ದೇನೆ” ಎಂದು ತಿಳಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಎಷ್ಟೇ ತೇಪೆ ಹಚ್ಚಿದರೂ ಸತ್ಯವನ್ನ ಮುಚ್ಚಿಡಲು ಸಾಧ್ಯವಿಲ್ಲ: ಆರ್‌ ಅಶೋಕ್‌