ಬೆಂಗಳೂರು: ರಾಜ್ಯದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಉಪಚುನಾವಣೆಗಳಲ್ಲಿ ಬಿಜೆಪಿ ಸೋಲಿನಿಂದ ಹತಾಶೆಗೊಂಡ ವಿಜಯಪುರ ಜಿಲ್ಲೆಯ ಬಿಜೆಪಿ ಕಾರ್ಯಕರ್ತನೊಬ್ಬರು ಮನೆಯ ಟಿವಿಯನ್ನು ಧ್ವಂಸ ಮಾಡಿದ್ಧಾರೆ. ಈ ಕುರಿತ ವಿಡಿಯೊ ವೈರಲ್ ಆಗಿದೆ.
ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಉಪ ಚುನಾವಣಾ ಫಲಿತಾಂಶದಲ್ಲಿ ಮತ ಎಣಿಕೆ ಭರದಿಂದ ಸಾಗುತ್ತಿದ್ದ ವೇಳೆ ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನತ್ತ ಸಾಗಿದ್ದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದನ್ನು ನೋಡಲಾಗದೇ ಬಿಜೆಪಿ ಕಾರ್ಯಕರ್ತ ಕಾರ್ಯಕರ್ತ ವೀರಭದ್ರಪ್ಪ ಟಿವಿಯನ್ನು ಒಡೆದುಹಾಕಿದ್ದಾರೆ.
ಮಧ್ಯಾಹ್ನ 12 ಗಂಟೆ ವೇಳೆಗೆ ಎಂಟರಿಂದ 10ನೇ ಸುತ್ತಿನ ಮತ ಎಣಿಕೆಯಿಂದ ಇವರು ಹಿನ್ನಡೆ ಅನುಭವಿಸಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದರು. ಮೂರಕ್ಕೆ ಮುರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ ಬೆನ್ನಲ್ಲಿಯೇ ತಾವು ನೋಡುತ್ತಿದ್ದ ಟಿವಿಯ ಮೇಲೆ ಪಕ್ಕದಲ್ಲಿದ್ದ ಚೇರ್ ತೆಗೆದುಕೊಂಡು ಎಸೆದಿದ್ದಾರೆ. ಜೊತೆಗೆ, ಟಿವಿಯನ್ನು ತೆಗೆದುಕೊಂಡು ಬಂದು ಮನೆಯ ಅಂಗಳದಲ್ಲಿ ಎಸೆದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಈ ಘಟನೆ ವಿಜಯಪುರ ಜಿಲ್ಲೆ ಕೋಲ್ಹಾರ ಪಟ್ಟಣದಲ್ಲಿ ನಡೆದಿದೆ. ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ವೀರಭದ್ರಪ್ಪ ಭಾಗಿ ಟಿವಿ ಒಡೆದು ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿ ಆಗಿದ್ದಾರೆ. ಬಿಜೆಪಿ ನಾಯಕರಲ್ಲಿ ಒಗ್ಗಟ್ಟಿಲ್ಲದೇ ಭಿನ್ನಮತ ಇರುವುದಕ್ಕೆ ಇಲ್ಲಿ ಸೋಲಾಗಿದೆ. ಬಿಜೆಪಿ ನಾಯಕರಲ್ಲಿ ಒಗ್ಗಟಿನ ಕೊರತೆಯಿಂದ ಹೀನಾಯ ಸೋಲಿಗೆ ಕಾರಣ ಎಂದು ಕಾರ್ಯಕರ್ತ ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.