ಶಿಲ್ಲಾಂಗ್ : ಮೇಘಾಲಯದ ಶಿಲ್ಲಾಂಗ್ ನಗರದ ಜನನಿಬಿಡ ಪೊಲೀಸ್ ಬಜಾರ್ ಪ್ರದೇಶದಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿದೆ.
ಸ್ಫೋಟದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಫೋಟ ಸಂಭವಿಸಿದ ಪ್ರದೇಶದಲ್ಲಿದ್ದ ಫೋನ್ ಅಂಗಡಿ ಹಾಗೂ ವೈನ್ ಅಂಗಡಿಯ ಮುಂಭಾಗಕ್ಕೆ ಹಾನಿಯಾಗಿದೆ. ಭಾನುವಾರ ಸಂಜೆ ಸುಮಾರು 6:15ರ ವೇಳೆ ಸಂಭವಿಸಿದ ಸ್ಫೋಟದ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದು, ಮಾರುಕಟ್ಟೆ ಪ್ರದೇಶವನ್ನು ಬ್ಯಾರಿಕೇಡ್ಗಳಿಂದ ಮುಚ್ಚಲಾಗಿದೆ.
ಸುಧಾರಿತ ಸ್ಫೋಟಕ ಸಾಧನದಿಂದ(ಐಇಡಿ) ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಬ್ ಸ್ಕ್ವಾಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಇದು ಯಾವ ರೀತಿಯ ಸ್ಫೋಟಕ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.