ನಾಗ್ಪುರ: ಮಹಾರಾಷ್ಟರದ ನಾಗ್ಪುರದಲ್ಲಿ ಔರಂಗಜೇಬ್ ಸಮಾಧಿ ವಿವಾದ ಹಿಂಸೆಗೆ ತಿರುಗಿದ್ದು ಘಟನೆಯಲ್ಲಿ ಹಲವು ಪೊಲೀಸರಿಗೂ ಗಾಯವಾಗಿದೆ. ಅಷ್ಟಕ್ಕೂ ಈ ಘಟನೆಗೆ ಕಾರಣವಾಗಿದ್ದು ಇದೊಂದೇ ತಪ್ಪು ಮಾಹಿತಿ ಎನ್ನಲಾಗಿದೆ.
ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಔರಂಗಜೇಬನ ಸಮಾಧಿಯನ್ನು ನೆಲಸಮ ಮಾಡಬೇಕು ಎಂದು ಗುಂಪೊಂದು ಪ್ರತಿಭಟನೆ ನಡೆಸಿತ್ತು. ಇದಾದ ಬಳಿಕ ಇಲ್ಲಿ ಪರಿಸ್ಥಿತಿ ಕೋಮು ಸಂಘರ್ಷವಾಗಿ ಬದಲಾಯಿತು. ಬಳಿಕ ಇದು ಹಿಂಸಾಚಾರಕ್ಕೆ ತಿರುಗಿದೆ.
ಪ್ರತಿಭಟನಾಕಾರರು ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು, ಘಟನೆಯಲ್ಲಿ ಹಲವು ಪೊಲೀಸರಿಗೂ ಗಾಯವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.
ಶಾಂತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಪ್ರಮುಖ ಕಾರಣ ಒಂದು ಸುಳ್ಳು ಸುದ್ದಿ. ಸಮಾಧಿ ನೆಲಸಮ ಮಾಡಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದ ಗುಂಪು ಮುಸ್ಲಿಮರ ಪವಿತ್ರ ಗ್ರಂಥವನ್ನು ಸುಟ್ಟು ಹಾಕಿದೆ ಎಂಬ ವದಂತಿ ಹಬ್ಬಿತ್ತು. ಇದರ ಬೆನ್ನಲ್ಲೇ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದೀಗ ಪೊಲೀಸರು ಸಾರ್ವಜನಿಕರು ಸುಳ್ಳು ವದಂತಿಗೆ ಕಿವಿಗೊಟ್ಟು ಶಾಂತಿ ಕದಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.