ನವದೆಹಲಿ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ದೆಹಲಿಯಲ್ಲಿ ಸೋತು ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಗೆ ಪಂಜಾಬ್ ಟೆನ್ಷನ್ ಶುರುವಾಗಿದೆ. ಇಂದು ಅವರು ಪಂಜಾಬ್ ಶಾಸಕರ ಸಭೆ ಕರೆದಿದ್ದಾರೆ.
ಅಬಕಾರಿ ಅಕ್ರಮ ಹಗರಣದಲ್ಲಿ ಬಂಧಿತರಾಗಿ ಬೇಲ್ ಮೇಲೆ ಬಿಡುಗಡೆಯಾದ ಬಳಿಕ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದ ಅರವಿಂದ್ ಕೇಜ್ರಿವಾಲ್ ಈ ಬಾರಿ ದೆಹಲಿ ಚುನಾವಣೆ ಗೆದ್ದು ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರುವ ವಿಶ್ವಾಸದಲ್ಲಿದ್ದರು. ಆದರೆ ಕೇಜ್ರಿವಾಲ್ ಅಂದುಕೊಂಡಿದ್ದು ನಡೆದಿಲ್ಲ.
ಇದರ ನಡುವೆ ಎಎಪಿ ಅಧಿಕಾರದಲ್ಲಿರುವ ಪಂಜಾಬ್ ನಲ್ಲಿ ಟೆನ್ಷನ್ ಶುರುವಾಗಿದೆ. ದೆಹಲಿಯಲ್ಲಿ ಎಎಪಿ ಸೋಲುತ್ತಿದ್ದಂತೇ ಇತ್ತ ಪಂಜಾಬ್ ಆಪ್ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ. ಕೆಲವು ಶಾಸಕರು ಈಗಾಗಲೇ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಬಂದಿದೆ.
ದೆಹಲಿಯಂತೂ ಹೋಯ್ತು, ಈಗಿರುವ ಪಂಜಾಬ್ ಉಳಿಸಿಕೊಳ್ಳುವ ಒತ್ತಡ ಕೇಜ್ರಿವಾಲ್ ರದ್ದು. ಅದಕ್ಕಾಗಿ ಅವರು ಇಂದು ಪಂಜಾಬ್ ಶಾಸಕರ ಜೊತೆ ಸಭೆ ಕರೆದಿದ್ದು, ಸರ್ಕಾರ ಉಳಿಸಿಕೊಳ್ಳುವ ಕಸರತ್ತು ನಡೆಸಲಿದ್ದಾರೆ. ಅವರ ಈ ಪ್ರಯತ್ನ ಎಷ್ಟು ಯಶಸ್ವಿಯಾಗುತ್ತದೋ ಕಾದು ನೋಡಬೇಕಿದೆ.