ಬೆಂಗಳೂರು: ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕರ್ನಾಟಕ ಕಾಂಗ್ರೆಸ್ ನಾಯಕ, ಸಚಿವ ಪ್ರಿಯಾಂಕ್ ಖರ್ಗೆ ಸೋಷಿಯಲ್ ಮೀಡಿಯಾಗಳು ಮೋದಿ ಪರವಾಗಿದೆ ಎಂದು ದೂರಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು ಬಿಜೆಪಿ 48 ಸ್ಥಾನ ಗೆದ್ದುಕೊಂಡು ಅಧಿಕಾರಕ್ಕೇರುತ್ತಿದೆ. ಈ ನಡುವೆ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲಲು ವಿಫಲವಾಗಿದೆ. ಇದರ ನಡುವೆಯೇ ಪ್ರಿಯಾಂಕ್ ಖರ್ಗೆ ಇಂತಹದ್ದೊಂದು ಆರೋಪ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ಪೇಜ್ ನಲ್ಲಿ ಟ್ವೀಟ್ ಮಾಡಿರುವ ಅವರು ನನಗೆ ಅನಿಸುವ ಪ್ರಕಾರ ಯೂ ಟ್ಯೂಬ್, ಎಕ್ಸ್, ಫೇಸ್ ಬುಕ್ ನಂತಹ ಸೋಷಿಯಲ್ ಮೀಡಿಯಾ ಪೇಜ್ ಗಳು ಮೋದಿ, ಅಮಿತ್ ಶಾ ಅಥವಾ ಬಿಜೆಪಿ ಬಗ್ಗೆ ಟೀಕೆ ಮಾಡುವ ಪೋಸ್ಟ್ ಗಳನ್ನು ತಡೆ ಹಿಡಿಯುತ್ತವೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ದಮನಿಸುವುದು ಅಪಾಯಕಾರಿ ಬೆಳವಣಿಗೆ ಎಂದಿದ್ದಾರೆ.
ಅಷ್ಟೇ ಅಲ್ಲ, ಈ ಬೆಳವಣಿಗೆ ಇಂತಹ ಸೋಷಿಯಲ್ ಮೀಡಿಯಾಗಳ ಮೇಲಿನ ವಿಶ್ವಾಸಾರ್ಹತೆಯೇ ಕಡಿಮೆಯಾಗುವಂತೆ ಮಾಡುತ್ತಿದೆ. ಸೋಷಿಯಲ್ ಮೀಡಿಯಾ ಪುಟಗಳು ಪಾರದರ್ಶಕವಾಗಿರಬೇಕಾದ ಅನಿವಾರ್ಯತೆಯಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದಕ್ಕೆ ಸಾಕಷ್ಟು ಟೀಕೆಗಳು ಬಂದಿವೆ. ಕುಣಿಯೋಕೆ ಬಾರದವನು ನೆಲ ಡೊಂಕು ಎಂದನಂತೆ ಎಂದು ಒಬ್ಬರು ಹೇಳಿದರೆ ನಿಮ್ಮ ವಾದಕ್ಕೆ ಏನಾದರೂ ಪುರಾವೆಯಿದೆಯೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.