Select Your Language

Notifications

webdunia
webdunia
webdunia
webdunia

ಕಾಶ್ಮೀರಿ ಪಂಡಿತರಿಗೆ ಎಲ್ಲಾ ನೆರವು ನೀಡುತ್ತೇವೆ: ರಾಹುಲ್ ಗಾಂಧಿ ಭರವಸೆ

ಕಾಶ್ಮೀರಿ ಪಂಡಿತರಿಗೆ ಎಲ್ಲಾ ನೆರವು ನೀಡುತ್ತೇವೆ: ರಾಹುಲ್ ಗಾಂಧಿ ಭರವಸೆ
ನವದೆಹಲಿ , ಶನಿವಾರ, 11 ಸೆಪ್ಟಂಬರ್ 2021 (13:29 IST)
ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ, ತಾವು ಹಾಗೂ ತಮ್ಮ ಕುಟುಂಬ ಸಹ ಇದೇ ಸಮುದಾಯಕ್ಕೆ ಸೇರಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ ನೆರವನ್ನೂ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದೇ ವೇಳೆ ಆರ್ಎಸ್ಎಸ್ ಹಾಗೂ ಬಿಜೆಪಿ, ಜಮ್ಮು ಕಾಶ್ಮೀರದ ವೈವಿಧ್ಯಮಯ ಸಂಸ್ಕೃತಿಯನ್ನು ಹಾಳು ಮಾಡಲು ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಇದರಿಂದಾಗಿ ಕೇಂದ್ರಾಡಳಿತ ಪ್ರದೇಶದ ಜನತೆಯ ನಡುವಿನ ಭ್ರಾತೃತ್ವದ ಮನೋಭಾವ ಹಾಳಾಗುತ್ತಿದೆ ಎಂದಿದ್ದಾರೆ.
"ನಿಮಗೆ ಸಹಾಯ ಮಾಡಿ ತೋರುತ್ತೇನೆ, ನಾನು ಸುಳ್ಳು ಹೇಳುವುದಿಲ್ಲ ಎಂದು ನಾನು ಕಾಶ್ಮೀರಿ ಪಂಡಿತ ಸಹೋದರರಿಗೆ ತಿಳಿಸಿದ್ದೇನೆ" ಎಂದು ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಉನ್ನತ ಸಭೆಯೊಂದರ ವೇಳೆ ರಾಹುಲ್ ತಿಳಿಸಿದ್ದಾರೆ.
"ಇಂದು ಬೆಳಿಗ್ಗೆ ಕಾಶ್ಮೀರಿ ಪಂಡಿತ ಸಹೋದರರ ನಿಯೋಗವೊಂದು ನನ್ನ ಬಳಿ ಬಂದಿತ್ತು. ಅವರು ನನ್ನೊಂದಿಗೆ ಮಾತನಾಡುತ್ತಿದ್ದ ವೇಳೆ ನಾನೂ ಸಹ ಇದೇ ಸಮುದಾಯಕ್ಕೆ ಸೇರಿದವನು ಎಂದು ನೆನಪಾಯಿತು. ಹೀಗಾಗಿ ಅವರ ನೋವು ನನಗೂ ಅರಿವಾಗುತ್ತದೆ" ಎಂದು ರಾಹುಲ್ ತಿಳಿಸಿದ್ದಾರೆ.
"25 ಲಕ್ಷ ರೂಪಾಯಿ ಪರಿಹಾರ ನೀಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ ಎಂದು ನನ್ನನ್ನು ಭೇಟಿ ಮಾಡಿದ ಕಾಶ್ಮೀರಿ ಪಂಡಿತರ ನಿಯೋಗ ತಿಳಿಸಿದೆ. ಕಾಶ್ಮೀರಿ ಪಂಡಿತರಿಗೆ ಪರಿಹಾರ ಘೋಷಣೆಯಾಗಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ" ಎಂದಿದ್ದಾರೆ ರಾಹುಲ್.
"ಶ್ರೀನಗರದಲ್ಲಿ ನಾನು ಹೇಳಿದ್ದೆ; ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಿದಾಗೆಲ್ಲಾ ನಾನು ನನ್ನ ಮನೆಗೆ ಬಂದಿದ್ದೇನೆ ಎನಿಸುತ್ತದೆ. ನೆನ್ನೆ ನಾನು ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದೆ. ಈ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ನನ್ನ ಕುಟುಂಬದೊಂದಿಗೆ ಬಹಳ ಹಳೆಯ ನಂಟಿದೆ" ಎಂದ ರಾಹುಲ್, 13 ಕಿಮೀ ಪಾದಯಾತ್ರೆ ಮೂಲಕ ವೈಷ್ಣೋದೇವಿ ದೇವಸ್ಥಾನದ ಯಾತ್ರೆ ಪೂರೈಸಿದ್ದಾರೆ.
1990ರ ಆರಂಭದ ವರ್ಷಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಬಲವಾಗತೊಡಗಿದ ಬಳಿಕ ಕಾಶ್ಮೀರಿ ಪಂಡಿತರು ಕಣಿವೆಯಿಂದ ಭಾರೀ ಪ್ರಮಾಣದಲ್ಲಿ ವಲಸೆ ಹೋಗಬೇಕಾಗಿ ಬಂದಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರ