ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ನಡೆದು ದೇಶದಾದ್ಯಂತ ದುಃಖ ಮಡುಗಟ್ಟಿದೆ. ಈ ಘಟನೆಗೂ ಮೊನ್ನೆಯಷ್ಟೇ ಪುರಿ ಜಗನ್ನಾಥ ದೇವಾಲಯದಲ್ಲಿ ಗರುಡ ಬಂದು ಕೇಸರಿ ಧ್ವಜ ಹೊತ್ತೊಯ್ದ ಘಟನೆಗೂ ಕೆಲವರು ಥಳುಕು ಹಾಕುತ್ತಿದ್ದಾರೆ.
ಮೊನ್ನೆಯಷ್ಟೇ ಪುರಿ ಜಗನ್ನಾಥ ದೇವಾಲಯಕ್ಕೆ ಸುತ್ತು ಹೊಡೆದ ಗರುಢ ಬಳಿಕ ನಿತ್ಯವೂ ಬದಲಾಯಿಸುವ ಕೇಸರಿ ಧ್ವಜವನ್ನು ಹೊತ್ತುಕೊಂಡು ಗೋಪುರಕ್ಕೆ ಸುತ್ತು ಹಾಕಿತ್ತು. ಬಳಿಕ ಸಮುದ್ರದ ಕಡೆಗೆ ಹಾರಿ ಮಾಯವಾಗಿತ್ತು.
ಈ ಘಟನೆ ಬಗ್ಗೆ ಆಸ್ತಿಕರು ಹಲವು ವ್ಯಾಖ್ಯಾನ ನೀಡಿದ್ದರು. ಇದು ದುರ್ಘಟನೆಯ ಸೂಚನೆಯೋ ಎಂದು ಆತಂಕ ವ್ಯಕ್ತಪಡಿಸಿದ್ದರು. ಇದೀಗ ಕೆಲವೇ ದಿನಗಳಲ್ಲಿ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ನಡೆದಿರುವ ಬೆನ್ನಲ್ಲೇ ಪುರಿ ದೇವಾಲಯದ ಗರುಡನ ಪ್ರಕರಣ ಮುನ್ನಲೆಗೆ ಬಂದಿದೆ.
ಕೆಲವರು ಇದು ಪಹಲ್ಗಾಮ್ ದುರ್ಘಟನೆಯ ಸೂಚನೆಯಾಗಿದ್ದಿರಬಹುದು ಎಂದು ಹೇಳಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ, ಇದೀಗ ದೇಶದಾದ್ಯಂತ ಉಗ್ರರನ್ನು ಸದೆಬಡಿಯಬೇಕು ಎಂಬ ಆಕ್ರೋಶ ಕೇಳಿಬರುತ್ತಿದೆ.