ಬೆಂಗಳೂರು: ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಗೆ ಕಣ್ಣೆದುರೇ ಪತಿ ಸಾವನ್ನಪ್ಪಿದ ಬೇಸರದಲ್ಲಿರುವ ಮಂಜುನಾಥ್ ಪತ್ನಿ ಪಲ್ಲವಿ ಗಂಡನ ರಕ್ತ ತಾಗಿದ ಈ ಜಾಕೆಟ್ ಯಾವತ್ತೂ ತೊಳೆಯಲ್ಲ ಎಂದಿದ್ದಾರೆ.
ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಂಜುನಾಥ್ ಪತ್ನಿ ಪಲ್ಲವಿ ನಡೆದ ಘಟನೆಯನ್ನು ಕಣ್ಣೀರು ಹಾಕುತ್ತಲೇ ವಿವರಿಸಿದ್ದಾರೆ. ಆ ದಿನ ಮಧ್ಯಾಹ್ನ ಮಗ ಸುಸ್ತಾಗಿದ್ದ, ಅವನಿಗೆ ಏನಾದರೂ ತಿಂಡಿ ಕೊಡಿಸೋಣ ಎಂದು ಮೋಮೋಸ್ ಆರ್ಡರ್ ಕೊಡಲು ಹೋದರು. ನನ್ನ ಬಳಿ ಮಗನನ್ನು ಕರೆದುಕೊಂಡು ಬಾ ಎಂದರು. ನಾನು ಎರಡು ಹೆಜ್ಜೆ ಮುಂದೆ ಹೋಗಿದ್ದೆ. ಅಷ್ಟರಲ್ಲಿ ಗುಂಡೇಟಿನ ಶಬ್ಧ ಬರುತ್ತಿತ್ತು. ಮೊದಲು ನಾವು ಪಟಾಕಿ ಎಂದೇ ಅಂದುಕೊಂಡಿದ್ದೆವು. ಆದರೆ ನಂತರ ಅದು ಹೆಚ್ಚಾಯ್ತು. ಒಂದು ಗುಂಡು ನೇರವಾಗಿ ನನ್ನ ಗಂಡನ ತಲೆಗೆ ಬಿತ್ತು.
ಒಂದು ಕ್ಷಣವೂ ಅವರು ಇರಲಿಲ್ಲ. ತಕ್ಷಣವೇ ಪ್ರಾಣ ಹೋಯ್ತು. ನಾನು ಅವರನ್ನು ಎತ್ತಿ ಕರೆಯಲು ನೋಡಿದೆ. ಆದರೆ ಅವರು ಏಳಲೇ ಇಲ್ಲ. ಪಕ್ಕದಲ್ಲೇ ಒಬ್ಬ ಟೆರರಿಸ್ಟ್ ಹೋಗುತ್ತಿದ್ದ. ನನ್ನ ಮಗ ಸಿಟ್ಟಿನಲ್ಲಿ ನನ್ನ ತಂದೆಯನ್ನು ಕೊಂದೆಯಲ್ವಾ ಪಾಪಿ ಎಂದು ಕಿರುಚಿದ. ನಾನು ನನ್ನ ಪತಿಯನ್ನು ಕೊಂದೆ ಅಲ್ವಾ ನಮ್ಮನ್ನೂ ಕೊಲ್ಲು ಎಂದೆ. ಆಗ ಅವನು ಮುಂದೆ ಹೋಗುತ್ತಿದ್ದವನು ನಹೀ.. ನಿಮ್ಮನ್ನು ಕೊಲ್ಲಲ್ಲ. ಮೋದಿಗೆ ಹೋಗಿ ಹೇಳು ಎಂದು ಮುಂದೆ ಹೋದ.
ನಾನು ಈಗ ಹಾಕಿರುವ ಜಾಕೆಟ್, ಬ್ಯಾಗ್ ಮೇಲೂ ರಕ್ತದ ಕಲೆಯಿದೆ. ಇದನ್ನು ನಾನು ಎಂದೂ ತೊಳೆಯಲ್ಲ. ಹಾಗೇ ಇಟ್ಟುಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.