ಇಸ್ಲಾಮಾಬಾದ್: ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯ ಬಳಿಕ ಭಾರತ ಸರ್ಕಾರ ಕೈಗೊಂಡಿರುವ ಕೆಲವು ಕಟ್ಟುನಿಟ್ಟಿನ ನಿರ್ಬಂಧದಿಂದ ಪಾಕಿಸ್ತಾನದಲ್ಲಿ ತಲ್ಲಣ ಮೂಡಿದೆ. ಈ ಕಾರಣಕ್ಕೆ ಪಾಕಿಸ್ತಾನ ಈಗ ತುರ್ತಾಗಿ ಉನ್ನತ ಮಟ್ಟದ ಸಭೆ ನಡೆದಿದೆ.
ಉಗ್ರರು ಅಮಾಯಕ ನಾಗರಿಕರ ಪ್ರಾಣ ತೆಗೆದ ಬೆನ್ನಲ್ಲೇ ರೊಚ್ಚಿಗೆದ್ದಿರುವ ಭಾರತ, ಪಾಕಿಸ್ತಾನ ಜೊತೆಗಿನ ಎಲ್ಲಾ ರಾಜತಾಂತ್ರಿಕ ಸಂಬಂಧ, ವ್ಯವಹಾರಗಳನ್ನು ಬಂದ್ ಮಾಡಿದೆ. ಇದರಲ್ಲಿ ಸಿಂಧು ನದಿ ಒಪ್ಪಂದ, ವೀಸಾ ರದ್ದು ಪ್ರಮುಖವಾಗಿದೆ.
ಭಾರತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಂತೇ ಇತ್ತ ಪಾಕಿಸ್ತಾನ ಸರ್ಕಾರಕ್ಕೆ ತಲ್ಲಣ ಶುರುವಾಗಿದೆ. ಹೀಗಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜೊತೆ ಪ್ರಧಾನಿ ಶಹಬಾಜ್ ಷರೀಫ್ ಸಭೆ ನಡೆಸಲಿದ್ದಾರೆ. ಭಾರತದ ಕ್ರಮಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಈ ಸಭೆ ಕರೆಯಲಾಗಿದೆ.
ಪಹಲ್ಗಾಮ್ ದಾಳಿಗೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿಕೊಂಡಿದ್ದರು. ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಉಗ್ರ ದಾಳಿಯನ್ನು ನಾವೂ ಖಂಡಿಸುತ್ತೇವೆ. ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸುತ್ತೇವೆ ಎಂದಿದ್ದರು.