ನವದೆಹಲಿ: ರಾಜ್ಯದ ವಿವಿಧ ಹೆದ್ದಾರಿ ಯೋಜನೆಗಳ ಬಗ್ಗೆ ಮಾತನಾಡಲು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಈ ವೇಳೆ ಗಡ್ಕರಿ ಬಳಿ ಹಲವು ಮನವಿಗಳನ್ನು ಮಾಡಿದರು. ನವದೆಹಲಿಯಲ್ಲಿ ಬುಧವಾರ ಬೆಳಗ್ಗೆ ನಿತಿನ್ ಗಡ್ಕರಿಯವರ ನಿವಾಸದಲ್ಲಿ ಭೇಟಿಯಾದ ಕುಮಾರಸ್ವಾಮಿ ಗಡ್ಕರಿಯೊಂದಿಗೆ ಮಾತುಕತೆ ನಡೆಸಿದರು.
ರಾಜ್ಯದಲ್ಲಿ ಹಲವಾರು ಹೆದ್ದಾರಿ ಯೋಜನೆಗಳ ಅಭಿವೃದ್ಧಿ ಆಗಬೇಕಿದ್ದು, ಆ ಬಗ್ಗೆ ಕ್ರಮ ವಹಿಸಬೇಕು ಎಂದು ಹತ್ತಕ್ಕೂ ಹೆಚ್ಚು ಯೋಜನೆಗಳ ಮನವಿ ಪತ್ರಗಳನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಗಡ್ಕರಿ ಅವರು ಕೆಲ ಯೋಜನೆಗಳ ಬಗ್ಗೆ ತಕ್ಷಣವೇ ಖುದ್ದಾಗಿ ಗಮನ ಹರಿಸುವುದಾಗಿ ಗಡ್ಕರಿ ಭರವಸೆ ನೀಡಿದರು.
ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು ಮುಂತಾದ ಜಿಲ್ಲೆಗಳ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ಸಾರಿಗೆ ಸಚಿವರ ಜೊತೆ ಕುಮಾರಸ್ವಾಮಿ ಸಮಾಲೋಚನೆ ನಡೆಸಿದರು. ನಮ್ಮ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಸಾರಿಗೆ ಸಚಿವರು, ಎಲ್ಲಾ ಯೋಜನೆಗಳ ಬಗ್ಗೆ ಖುದ್ದು ಗಮನ ಹರಿಸುವುದಾಗಿ ಭರವಸೆ ನೀಡಿದರು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಡ್ಯ ಹೊರವರ್ತುಲ ರಸ್ತೆ ಯೋಜನೆ, ಬೈಪಾಸ್ ಅಭಿವೃದ್ಧಿಗೆ ಕುಮಾರಸ್ವಾಮಿ ಮನವಿ ಮಾಡಿದರು.