Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ಈ ವರ್ಷ 327 ಬಾಣಂತಿಯರ ಸಾವು, ಇದೇನಾ ಮಹಿಳೆಯರ ಸಬಲೀಕರಣ: ಎಚ್‌ಡಿಕೆ ಕಿಡಿ

Central Minister HD Kumaraswamy, Bellary Maternal Case, Chief Minister Siddaramaiah

Sampriya

ಬೆಂಗಳೂರು , ಶನಿವಾರ, 7 ಡಿಸೆಂಬರ್ 2024 (19:11 IST)
ಬೆಂಗಳೂರು:  ಬಳ್ಳಾರಿಯಲ್ಲಿ ನಡೆದ ಸರಣಿ ಬಾಣಂತಿಯರ ಸಾವು ಪ್ರಕರಣದ ಸಂಬಂಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸ್ವತಃ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅವರೇ ನೀಡಿರುವ ಈ ಮಾಹಿತಿ ನನಗೆ ಆಘಾತವುಂಟು ಮಾಡಿದೆ. ವೈದ್ಯ ಕ್ಷೇತ್ರದಲ್ಲಿ ಅಗಾಧ ಮುನ್ನಡೆ ಸಾಧಿಸಿರುವ ಈ ಆಧುನಿಕ ಕಾಲದಲ್ಲಿಯೂ ಮಹಿಳೆಯರು ಆಸ್ಪತ್ರೆಗಳಲ್ಲಿಯೇ ಜೀವ ಚೆಲ್ಲುತ್ತಿರುವುದು ರಾಜ್ಯಕ್ಕೆ ಗೌರವ ತರುವ ವಿಚಾರವಲ್ಲ.

ಮಹಿಳೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿ ಕೊಟ್ಟು ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಿದ್ದೇವೆ ಎನ್ನುವ ರಾಜ್ಯ ಕಾಂಗ್ರೆಸ್‌ ಸರಕಾರ; ಆಸ್ಪತ್ರೆಗಳಲ್ಲಿ ಅದೇ ಗೃಹಲಕ್ಷ್ಮೀಯರ ಜೀವಹರಣ ಮಾಡುತ್ತಿದೆ. ಮಗುವಿಗೆ ಜನ್ಮ ನೀಡಲು ಸರಕಾರಿ ಆಸ್ಪತ್ರೆಗೆ ವಿಶ್ವಾಸದಿಂದ ತೆರಳುವ ಗೃಹಲಕ್ಷ್ಮಿಯರು ಜೀವಸಮೇತ ಮರಳಿ ಮನೆಗೆ ಬರುವ ಗ್ಯಾರಂಟಿಯೇ ಇಲ್ಲ!!
ಇದೇನಾ ಮಹಿಳೆಯರ ಸಬಲೀಕರಣ?

ರಾಜ್ಯದಲ್ಲಿ ಸರಕಾರಿ ಆರೋಗ್ಯ ವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಆಸ್ಪತ್ರೆಗಳು ಸಾವಿನ ಕೂಪಗಳಾಗಿವೆ. ಕಳಪೆ ಗ್ಲೂಕೋಸ್, ಔಷಧಗಳಿಂದ ಗೃಹಲಕ್ಷ್ಮೀಯರು ಬಲಿಯಾಗುತ್ತಿದ್ದಾರೆ. ಬಳ್ಳಾರಿ ಆಸ್ಪತ್ರೆಯಲ್ಲಿ IV ದ್ರಾವಣ, ಅಂದರೆ; ರಿಂಗರ್ ಲ್ಯಾಕ್ಟೇಟ್ ದ್ರಾವಣ (Ringer lactate infusion) ಪಡೆದ ಎರಡೇ ಗಂಟೆಯಲ್ಲಿ 9 ಬಾಣಂತಿಯರು ಅಸ್ವಸ್ಥರಾಗಿದ್ದರೆನ್ನುವುದು ಕಳವಳಕಾರಿ. ಹಾಗಾದರೆ, ಈ ದ್ರಾವಣ ಪೂರೈಸಿದ ಕಂಪನಿ ಯಾವುದು? ಅದು ಯಾರದ್ದು?

ಅನೇಕ ದಿನಗಳಿಂದ ಕಳಪೆ ಗ್ಲೂಕೋಸ್, ಔಷಧ ಪೂರೈಕೆ ಆಗುತ್ತಿದ್ದರೂ ಸರಕಾರ ಏನು ಮಾಡುತ್ತಿತ್ತು? ಇಷ್ಟು ಸೂಕ್ಷ್ಮ ವಿಚಾರವನ್ನು ಆರೋಗ್ಯ ಸಚಿವರು  ಅಲಕ್ಷ್ಯ ಮಾಡಿದ್ದೇಕೆ? ಸಚಿವರಿಗೆ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ಗೊತ್ತೇ ಇರಲಿಲ್ಲವೇ?

ನನ್ನ ತಪ್ಪಿದ್ದರೆ ರಾಜೀನಾಮೆ ಕೊಡುವೆ ಎಂಬ ಸಚಿವರ ಹೇಳಿಕೆ ಅನಪೇಕ್ಷಿತ. ಜವಾಬ್ದಾರಿ ಕೊಟ್ಟಿರುವುದು ಕೈ ತೊಳೆದುಕೊಂಡು ಪಾರಾಗಲಿಕ್ಕಲ್ಲ. ಅಗತ್ಯವಿರುವುದು ರೋಗಗ್ರಸ್ತ ಆರೋಗ್ಯ ಇಲಾಖೆಗೆ ಸೂಕ್ತ ಚಿಕಿತ್ಸೆ. ಪಲಾಯನಕ್ಕಿಂತ ಪ್ರಾಯಶ್ಚಿತ್ತ ಮುಖ್ಯ. ಇಲಾಖೆಯನ್ನು ಸರಿ ಮಾಡುವುದು ಅವರ ಹೊಣೆ. ಗೃಹಲಕ್ಷ್ಮೀಯರ ಪಾಪ ಅವರನ್ನು ಸುಮ್ಮನೆ ಬಿಡುವುದಿಲ್ಲ.

ಈ ಮರಣಗಳಿಂದ ಸರಕಾರ ನುಣಚಿಕೊಳ್ಳಲು ಸಾಧ್ಯವಿಲ್ಲ. ಹೈಕೋರ್ಟ್'ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಹದಗೆಟ್ಟ ಆರೋಗ್ಯ ವ್ಯವಸ್ಥೆಯನ್ನು ಹಳಿಗೆ ತರುವ ಕೆಲಸ ತುರ್ತಾಗಿ ಆಗಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಜೀವ ಬೆದರಿಕೆ ಸಂದೇಶ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು