Select Your Language

Notifications

webdunia
webdunia
webdunia
webdunia

ಸರ್ಜಾಪುರದಿಂದ ಹೆಬ್ಬಾಳದವರೆಗೆ ನಮ್ಮ ಮೆಟ್ರೊ ಜಾಲ: 3ನೇ ಹಂತದ ಯೋಜನೆಗೆ ಸಚಿವ ಸಂಪುಟ ಹಸಿರುನಿಶಾನೆ

Our Metro Bangalore

Sampriya

ಬೆಂಗಳೂರು , ಶನಿವಾರ, 7 ಡಿಸೆಂಬರ್ 2024 (14:33 IST)
Photo Courtesy X
ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟನೆಯನ್ನು ತಗ್ಗಿಸಲು ನಮ್ಮ ಮೆಟ್ರೊ ಜಾಲವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸರ್ಜಾಪುರದಿಂದ ಹೆಬ್ಬಾಳದವರೆಗೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆ ನಮ್ಮ ಮೆಟ್ರೋ 3ನೇ ಹಂತಕ್ಕೆ ಶನಿವಾರ ಸಚಿವ ಸಂಪುಟ ಅನುಮೋದನೆ ನೀಡಿದೆ.

ನಮ್ಮ ಮೆಟ್ರೋದ 3ಎ ಹಂತವಾಗಿರುವ ಕೆಂಪು ಮಾರ್ಗ ಸರ್ಜಾಪುರದಿಂದ ಪ್ರಾರಂಭವಾಗಿ ಕೋರಮಂಗಲ ಮೂಲಕ ಹೆಬ್ಬಾಳಕ್ಕೆ ತಲುಪುವ 36.59 ಕಿ.ಮೀ ಇದಾಗಿದೆ. ಈವರೆಗಿನ ಹಂತಗಳ ಪೈಕಿ ಅತೀ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಮಾರ್ಗ ಇದಾಗಿದೆ.

ಕೆಂಪು ಮಾರ್ಗದ ಪ್ರತಿ ಕಿ.ಮೀ ನಿರ್ಮಾಣಕ್ಕೆ ₹776 ಕೋಟಿ ತಗುಲಲಿದೆ. ಒಟ್ಟು ₹ 28,405 ಕೋಟಿ ವೆಚ್ಚದಲ್ಲಿ 36.59 ಕಿಮೀ ಮೆಟ್ರೋ ಮಾರ್ಗ ನಿರ್ಮಿಸಲು ಸಂಪುಟ ತೀರ್ಮಾನಿಸಿದೆ. ಕೆಂಪು ಮಾರ್ಗದ ಮೆಟ್ರೋ ನಿರ್ಮಾಣಗೊಂಡರೆ ನಮ್ಮ ಮೆಟ್ರೊದ ಒಟ್ಟು 258 ಕಿ.ಮೀ. ಮಾರ್ಗ ಸಿದ್ಧವಾಗುತ್ತದೆ.

ಈ ಯೋಜನೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಮುಂದಿನ ಒಂದು ವರ್ಷದೊಳಗೆ ಕೇಂದ್ರದ ಅನುಮೋದನೆ ಸಿಗುವ ಸಾಧ್ಯತೆ ಇದೆ. ಬಳಿಕ 2026ರಲ್ಲಿ ಇದರ ಕಾಮಗಾರಿ ಆರಂಭವಾಗಿ 2031ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.

ಸರ್ಜಾಪುರದಿಂದ ಹೆಬ್ಬಾಳದ ವರೆಗೆ 36.59 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು, 36.59 ಕಿ.ಮೀ ಪೈಕಿ 22.14 ಕಿ.ಮೀ ಫ್ಲೈಓವರ್ ಮಾರ್ಗವಾಗಿದೆ. ಇನ್ನುಳಿದ 14.45 ಕಿ.ಮೀ ಸುರಂಗ ಮಾರ್ಗವಾಗಿರಲಿದೆ. ಒಟ್ಟು 28 ಸ್ಟೇಷನ್‌ಗಳಿದ್ದು, ಅದರಲ್ಲಿ 17 ಮಹಡಿ ನಿಲ್ದಾಣಗಳು ಹಾಗೂ 11 ಸುರಂಗ ಮಾರ್ಗ ನಿಲ್ದಾಣಗಳು ಇರಲಿವೆ. ಇಬ್ಬಲೂರು, ಅಗರ, ಡೈರಿ ಸರ್ಕಲ್, ಕೆಆರ್ ಸರ್ಕಲ್ ಹಾಗೂ ಹೆಬ್ಬಾಳದಲ್ಲಿ 5 ಇಂಟರ್ ಚೇಂಜ್ ಸ್ಟೇಷನ್‌ಗಳ ನಿರ್ಮಾಣವಾಗಲಿದೆ.

ನಿಲ್ದಾಣಗಳು: ಸರ್ಜಾಪುರದಿಂದ ಪ್ರಾರಂಭವಾಗಿ ಕಾಡ ಅಗ್ರಹಾರ ರೋಡ್, ಸೋಂಪುರ, ದೊಮ್ಮಸಂದ್ರ, ಮುತ್ತನಲ್ಲೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕಾರ್ಮಲ್ ರಾಂ, ದೊಡ್ಡಕನ್ನೆಲ್ಲಿ, ಕೈಕೊಂಡ್ರಹಳ್ಳಿ, ಬೆಳ್ಳಂದೂರು ಗೇಟ್, ಇಬ್ಬಲೂರು, ಅಗರ, ಜಕ್ಕಸಂದ್ರ, ಕೋರಮಂಗಲ 3ನೇ ಬ್ಲಾಕ್, ಕೋರಮಂಗಲ 2ನೇ ಬ್ಲಾಕ್, ಡೈರಿ ಸರ್ಕಲ್, ನಿಮ್ಹಾನ್ಸ್ , ಶಾಂತಿನಗರ, ಟೌನ್ ಹಾಲ್, ಕೆಆರ್ ಸರ್ಕಲ್, ಬಸವೇಶ್ವರ ಸರ್ಕಲ್, ಬೆಂಗಳೂರು ಗಾಲ್ಫ್ ಕೋರ್ಸ್, ಮೇಖ್ರಿ ಸರ್ಕಲ್, ಪ್ಯಾಲೇಸ್ ಗುಟ್ಟಹಳ್ಳಿ, ವೆಟರ್ನರಿ ಕಾಲೇಜು, ಗಂಗಾನಗರ, ಹೆಬ್ಬಾಳವರೆಗೆ ಪ್ರಯಾಣಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಪ್ರಕರಣ ಪ್ರಧಾನಿ ಅಂಗಳಕ್ಕೆ: ಸಿಬಿಐ ತನಿಖೆ ಕೋರಿ ಮೋದಿಗೆ 296 ಪುಟಗಳ ದಾಖಲೆ ಸಲ್ಲಿಕೆ