ಅತಿರಪ್ಪಿಳ್ಳಿ: ಇಲ್ಲಿನ ಸಮೀಪದ ಅರಣ್ಯದಲ್ಲಿ ಕಾಡಾನೆ ದಾಳಿಗೆ ಆದಿವಾಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಮೃತರನ್ನು ಆದಿಚಿಲಿತೊಟ್ಟಿ ಗಿರಿಜನ ಬಡಾವಣೆಯ ನಿವಾಸಿ ತಂಬಾನ್ ಎಂಬವರ ಪುತ್ರ ಸೆಬಾಸ್ಟಿಯನ್ (20) ಎಂದು ಗುರುತಿಸಲಾಗಿದೆ.
ರಾತ್ರಿ 10 ಗಂಟೆ ಸುಮಾರಿಗೆ ಈ ದಾರುಣ ಘಟನೆ ನಡೆದಿದೆ. ಭಾನುವಾರ ರಾತ್ರಿ, ಸೆಬಾಸ್ಟಿಯನ್ ಮತ್ತು ಸ್ನೇಹಿತರ ಗುಂಪು ಜೇನು ಸಂಗ್ರಹಿಸಿ ಕಾಡಿನಿಂದ ವಾಪಾಸ್ಸಾಗುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಸೆಬಾಸ್ಟಿಯನ್ ಗಂಭೀರವಾಗಿ ಗಾಯಗೊಂಡಿದ್ದ.
ಪೊಲೀಸ್ ವರದಿಗಳ ಪ್ರಕಾರ, ರಾತ್ರಿ ವೇಳೆ ಕಾಣಿಸಿಕೊಂಡ ಆನೆಯಿಂದ ತಪ್ಪಿಸಿಕೊಳ್ಳಲು ಮೂವರು ಓಡಿಹೋಗಲು ಯತ್ನಿಸಿದ್ದಾರೆ. ಈ ವೇಳೆ ಸೆಬಾಸ್ಟಿಯನ್ ಆನೆಯ ದಾಳಿಯಿಂದ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಾಲಕುಡಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.