ಡೆಹ್ರಾಡೂನ್: ತರಗತಿಯಲ್ಲಿ ಶಿಕ್ಷಕ ಕಪಾಳಮೋಕ್ಷ ಮಾಡಿದ್ದಾನೆಂದು ಕೋಪದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ ಮೇಲೆ ಗುಂಡು ಹಾರಿಸಿದ ಘಟನೆ ಉತ್ತರಾಖಂಡದ ಉಧಮ್ ನಗರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಈ ವಾರದ ಆರಂಭದಲ್ಲಿ ವಿದ್ಯಾರ್ಥಿಯೊಬ್ಬರಿಗೆ ಶಿಕ್ಷಕ ಗಂಗನ್‌ದೀಪ್ ಸಿಂಗ್ ಕೊಹ್ಲಿ ಅವರು ಕಪಾಳಮೋಕ್ಷ ಮಾಡಿದ್ದರು. ಅದೇ ಜಿದ್ದಿನಲ್ಲಿದ್ದ ವಿದ್ಯಾರ್ಥಿ ಬುಧವಾರ ತನ್ನ ಟಿಫಿನ್ ಬಾಕ್ಸ್‌ನಲ್ಲಿ ಗನ್ ಪ್ಯಾಕ್ ಮಾಡಿ ತಂದಿದ್ದಾನೆ. ವಿರಾಮದ ಬಳಿಕ ಶಿಕ್ಷಕ ಕೊಹ್ಲಿ ತರಗತಿಯಿಂದ ಹೊರಬರುತ್ತಿದ್ದ ಹಾಗೇ ಅವರ ಬೆನ್ನಿಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುನಾನಕ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕನ ಬೆನ್ನಿನಿಂದ ಗುಂಡು ತಗುಲಿ ಕುತ್ತಿಗೆಗೆ ಗುಂಡು ತಗುಲಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಅವರ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸುತ್ತಿರುವ ವೈದ್ಯ ಮಯಾಂಕ್ ಅಗರ್ವಾಲ್ ಅವರು ಬುಲೆಟ್ ಅನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ ಎಂದು ಖಚಿತಪಡಿಸಿದ್ದಾರೆ. ಕೊಹ್ಲಿ ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಹೆಚ್ಚಿನ ಮೇಲ್ವಿಚಾರಣೆಗಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ವಿದ್ಯಾರ್ಥಿಯನ್ನು ಸಮರತ್ ಬಜ್ವಾ ಎಂದು ಗುರುತಿಸಲಾಗಿದ್ದು, ತನ್ನ ಊಟದ ಬಾಕ್ಸ್‌ನಲ್ಲಿ ಪಿಸ್ತೂಲ್ ಅನ್ನು ಬಚ್ಚಿಟ್ಟು ತರಗತಿಗೆ ತಂದಿದ್ದಾನೆ. ಬೆವಿದ್ಯಾರ್ಥಿ ಪರಾರಿಯಾಗಲು ಯತ್ನಿಸಿದ್ದು, ಇತರೆ ಶಿಕ್ಷಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಅಪ್ರಾಪ್ತ ವಿದ್ಯಾರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹದಿಹರೆಯದವರಿಗೆ ಬಂದೂಕು ಹೇಗೆ ಸಿಕ್ಕಿತು ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.