ನವದೆಹಲಿ: ಅಮೆರಿಕದಲ್ಲಿ 6,75,000 ಭಾರತೀಯ ಅಕ್ರಮ ವಲಸಿಗರಿದ್ದಾರೆ. ಈ ಪೈಕಿ 18,000 ಮಂದಿ ಅಂತಿಮ ಪಟ್ಟಿಯಲ್ಲಿದ್ದಾರೆ ಎಂದು ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಮಾಹಿತಿ ನೀಡಿದ್ದಾರೆ.
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನು ಗಡೀಪಾರು ಮಾಡುತ್ತಿರುವುದರ ಕುರಿತು ಕೋಲಾಹಲ ಎದ್ದಿದೆ. ಅದರಲ್ಲೂ ಕೈಗೆ ಕೋಳ ತೊಡಿಸಿ, ಕಾಲಿಗೆ ಕಬ್ಬಿಣದ ಸಂಕೋಲೆ ಹಾಕಿ ಕಳುಹಿಸಿರುವುದು ಭಾರಿ ಆಕ್ರೋಶಕ್ಕೆ ಎಡೆಮಾಡಿದೆ.
2022ರ ಪ್ಯೂ ರಿಸರ್ಚ್ ವರದಿಯ ಪ್ರಕಾರ ಅಮೆರಿಕದಲ್ಲಿ ಇನ್ನೂ 6,75,000 ದಾಖಲೆರಹಿತ ಭಾರತೀಯ ವಲಸಿಗರು ಇದ್ದಾರೆ ಮತ್ತು 18,000 ಜನರು ಅಂತಿಮ ಪಟ್ಟಿಯಲ್ಲಿದ್ದಾರೆ. ಈ ಎಲ್ಲ ಜನರು ಹಿಂದಿರುಗಿದಾಗ ಸರ್ಕಾರವು ಅವರಿಗೆ ಯಾವ ಮಾರ್ಗ ತೋರಲಿದೆ ಎಂಬುದನ್ನು ತಿಳಿಸಬೇಕು ಎಂದು ಓವೈಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೋದಿ ಜಿ ಭಾರತದ ಹೆಸರನ್ನು ಎತ್ತರಕ್ಕೆ ಏರಿಸಿದ್ದಾರೆ. ಭಾರತವನ್ನು ಸೂಪರ್ ಪವರ್ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇರುತ್ತಾರೆ. ಆದರೆ, ಈಗ ಏನಾಗುತ್ತಿದೆ? ಭಾರತೀಯರನ್ನು ಏಕೆ ಅಮೆರಿಕ ಅಗೌರವದಿಂದ ನಡೆಸಿಕೊಂಡಿದೆ? ಎಂದು ಪ್ರಶ್ನಿಸಿದ್ದಾರೆ.
ಇದು ಭಾರತದ ಯುವಜನರಲ್ಲಿ ನಿರುದ್ಯೋಗದ ಮಟ್ಟವನ್ನು ಪ್ರತಿಬಿಂಬಿಸುತ್ತದೆ. ದೇಶದಲ್ಲಿ ಶೇಕಡ 45ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಈ ಕಾರಣಕ್ಕಾಗಿಯೇ ಏಜೆಂಟರಿಂದ ಆಮಿಷಕ್ಕೆ ಒಳಗಾಗುತ್ತಾರೆ. ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ ಮತ್ತು ಅಮೆರಿಕ ತಲುಪಲು 8-10 ದೇಶಗಳನ್ನು ದಾಟುತ್ತಾರೆ. ಇಷ್ಟೊಂದು ನಿರುದ್ಯೋಗ ಏಕೆ ಇದೆ ಎಂದು ಸರ್ಕಾರ ಉತ್ತರಿಸಬೇಕು ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.