ನವದೆಹಲಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ಅಮೆರಿಕಾದಿಂದ ಭಾರತೀಯ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲಾಗಿದೆ. ಅಮೆರಿಕಾದಿಂದ ಗಡೀಪಾರಾದ 104 ಭಾರತೀಯರು ಈಗ ತವರಿಗೆ ವಾಪಸಾಗಿದ್ದಾರೆ. ಅವರೆಲ್ಲರ ಕಣ್ಣೀರ ಕತೆ ಈಗ ಒಂದೊಂದೇ ಹೊರಬೀಳುತ್ತಿದೆ.
ಅಮೆರಿಕಾದಿಂದ ಮಿಲಿಟರಿ ವಿಮಾನದಲ್ಲಿ 104 ಭಾರತೀಯರು ಗಡೀಪಾರಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ಇವರಲ್ಲಿ ಹೆಚ್ಚಿನವರು ಗುಜರಾತ್, ಹರ್ಯಾಣ ಮತ್ತು ಪಂಜಾಬ್ ಮೂಲದವರೇ. ಗಡೀಪಾರಾಗಿ ಬಂದವರಲ್ಲಿ 25 ಮಹಿಳೆಯರು 13 ಮಕ್ಕಳೂ ಸೇರಿದ್ದಾರೆ.
ಬಹುತೇಕರು ಅಲ್ಲಿಯೇ ಬದುಕು ಕಟ್ಟಿಕೊಳ್ಳುವ ಆಸೆಯಿಂದ ಮಧ್ಯವರ್ತಿಗಳ ಸಹಾಯದಿಂದ ಅಮೆರಿಕಾಗೆ ಪ್ರಯಾಣಿಸಿದ್ದರು. ಹೆಚ್ಚಿನವರು ತಮ್ಮ ವೀಸಾ, ಉದ್ಯೋಗ ಇತ್ಯಾದಿ ವ್ಯವಸ್ಥೆ ಮಾಡಿಕೊಳ್ಳಲು ಏಜೆಂಟರುಗಳಿಗೆ ಸಾಕಷ್ಟು ಹಣ ನೀಡಿದ್ದರು.
ಅದರಲ್ಲೂ ಗುಜರಾತ್ ನ ಕುಟುಂಬವೊಂದು 1 ಕೋಟಿ ರೂ. ಏಜೆಂಟ್ ಗಳಿಗೆ ನೀಡಿದ್ದರಂತೆ. ಈಗ ದುಡ್ಡೂ ಹೋಯ್ತು, ಅಂದುಕೊಂಡಂತೆ ನಡೆಯಲೂ ಇಲ್ಲ. ಭವಿಷ್ಯಕ್ಕೇನು ಮಾಡುವುದು ಎಂಬ ಚಿಂತೆ ಆ ಕುಟುಂಬದವರದ್ದು. ಮತ್ತೊಬ್ಬರು ಅಮೆರಿಕಾಗೆ ತೆರಳು 42 ಲಕ್ಷ ಖರ್ಚು ಮಾಡಿದ್ದರಂತೆ. ಈಗ ಆ ಹಣವನ್ನು ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಅತ್ತ ಮಕ್ಕಳ ಭವಿಷ್ಯವೂ ಹಾಳಾಗಿದೆ. ಇತ್ತ ಪೋಷಕರಿಗೂ ಉದ್ಯೋಗವಿಲ್ಲದಂತಾಗಿದೆ. ಮತ್ತೆ ಶುರುವಿನಿಂದ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಇವರಿದ್ದಾರೆ.