ನವದೆಹಲಿ: ದೆಹಲಿ ಸ್ಫೋಟ ಮತ್ತು ಫರಿದಾಬಾದ್ ಸ್ಫೋಟಕಗಳ ದಂಧೆಯಲ್ಲಿ ಜೈಶ್-ಎ-ಮೊಹಮ್ಮದ್ ನಂಟು ಕುರಿತು ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಡಾ. ಶಾಹೀನ್ ಸಯೀದ್ ಜೈಶ್ ಕಮಾಂಡರ್ ಮತ್ತು ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಮರ್ ಫಾರೂಕ್ ಅವರ ಪತ್ನಿ ಅಫೀರಾ ಬೀಬಿಯೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ಮಹತ್ವದ ಮಾಹಿತಿ ಲಭಿಸಿದೆ.
2019 ರ ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ಸೋದರಳಿಯ ಉಮರ್ ಫಾರೂಕ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟನು, ಇದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ 40 ಸಿಬ್ಬಂದಿಯನ್ನು ಬಲಿ ತೆಗೆದುಕೊಂಡಿತು.
ಉಮರ್ ಪತ್ನಿ ಅಫಿರಾ ಬೀಬಿ, ಜೈಶ್‌ನ ಹೊಸದಾಗಿ ಪ್ರಾರಂಭಿಸಲಾದ ಮಹಿಳಾ ಬ್ರಿಗೇಡ್ ಜಮಾತ್-ಉಲ್-ಮೊಮಿನಾತ್‌ನ ಪ್ರಮುಖ ಮುಖ ಎಂದು ತಿಳಿದುಬಂದಿದೆ.
ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಹಿರಿಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ ಶಾಹೀನ ಕಾರಿನಲ್ಲಿ ಅಸಾಲ್ಟ್ ರೈಫಲ್‌ಗಳು ಮತ್ತು ಇತರ ಮದ್ದುಗುಂಡುಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಆಕೆಯನ್ನು ಬಂಧಿಸಲಾಗಿತ್ತು. ಜಮಾತ್-ಉಲ್-ಮೊಮಿನಾತ್‌ನ ವಿಭಾಗವನ್ನು ಭಾರತದಲ್ಲಿ ಸ್ಥಾಪಿಸುವ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಮಹಿಳೆಯರನ್ನು ನೇಮಿಸುವ ಕೆಲಸವನ್ನು ಆಕೆಗೆ ವಹಿಸಲಾಗಿತ್ತು ಎಂದು ತನಿಖೆಯಿಂದ ಇದೀಗ ಬಹಿರಂಗವಾಗಿದೆ.