Select Your Language

Notifications

webdunia
webdunia
webdunia
webdunia

ನೀವು ಚಾರಣ (ಟ್ರೆಕ್ಕಿಂಗ್) ಪ್ರಿಯರೇ... ನಿಮಗಾಗಿ ಒಂದು ಕಿರು ಮಾಹಿತಿ

ನೀವು ಚಾರಣ (ಟ್ರೆಕ್ಕಿಂಗ್) ಪ್ರಿಯರೇ... ನಿಮಗಾಗಿ ಒಂದು ಕಿರು ಮಾಹಿತಿ

ಗುರುಮೂರ್ತಿ

ಬೆಂಗಳೂರು , ಬುಧವಾರ, 13 ಡಿಸೆಂಬರ್ 2017 (15:57 IST)
ಜಗತ್ತು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದರ ನಡುವೆ ನಾವು ಅದರ ಸುಳಿಯಲ್ಲಿ ಸಿಲುಕಿ ಜೀವನದ ಸತ್ವವನ್ನೇ ಕಳೆದುಕೊಳ್ಳುವಷ್ಟು ಆಳಕ್ಕೆ ಇಳಿದು ಬಿಟ್ಟಿದ್ದೇವೆ,

ನಗರ ವಾಸಿಗಳ ಪಾಡಂತೂ ಹೇಳತೀರದು ನಾವು ಚಿಕ್ಕವರಿದ್ದಾಗ ಸಿಗುತ್ತಿದ್ದ ಹಳ್ಳಿ ಮನೆ ವಾತಾವರಣ, ಸ್ನೇಹಿತರೊಂದಿಗೆ ಕಳೆದ ಕ್ಷಣಗಳು ಮನೆಯವರೊಂದಿಗೆ ಮಾಡಿದ ಹಬ್ಬದ ಊಟ, ಕಾಲೇಜಿನ ದಿನಗಳು ಇವೆಲ್ಲವೂ ಇಂದಿನ ದಿನಗಳಲ್ಲಿ ನೆನಪುಗಳಾಗಿ ಮಾತ್ರವೇ ಉಳಿದಿವೆಯೇ ಹೊರತು ಅದನ್ನು ಪಡೆಯಲು ಸಾಧ್ಯವಿಲ್ಲ ಹೀಗೆ ಕಾಲ ಬದಲಾಗುತ್ತಾ ಹೋದಂತೆ ಕೆಲಸ, ಮನೆ ಒತ್ತಡದ ಬದುಕಿನ ನಡುವೆ ನಮ್ಮನ್ನು ನಾವು ಮರೆಯುವಷ್ಟು ತಲ್ಲಿನವಾಗಿರುವುದು ದುರದೃಷಕರ ಅಂತಾನೇ ಹೇಳಬಹುದು.
 
ಇಂದಿನ ಒತ್ತಡದ ದಿನಗಳಲ್ಲಿ ನಮಗಾಗಿ ಸಮಯವನ್ನು ಕಾಯ್ದಿರಿಸುವುದು ಸ್ವಲ್ಪ ಕಷ್ಟವೇ, ದಿನಪೂರ್ತಿ ಕೆಲಸ ಎಂದು ಒದ್ದಾಡುವ ನಮ್ಮಲ್ಲೂ ಚಿಕ್ಕ ಚಿಕ್ಕ ಆಸೆಗಳಿರುತ್ತವೆ ಆದರೆ ಸಮಯವಿರುವುದಿಲ್ಲ, ಬಹಳಷ್ಟು ಜನರು ರಜೆ ಸಿಕ್ಕರೆ ಸಾಕು ತಮ್ಮ ಸ್ವಂತ ಊರಿಗೆ ಹೊರಡುತ್ತಾರೆ, ಇನ್ನು ಕೆಲವರು ಅಲ್ಲೇ ಸುತ್ತಮುತ್ತಲಿರುವ ದೇವಸ್ಥಾನವೋ ಹತ್ತಿರದ ಶಾಪಿಂಗ್ ಮಾಲೋಗೋ ಹೋಗಿ ಕಾಲ ಕಳೆಯುತ್ತಾರೆ. ಇನ್ನು ಕೆಲವು ಹೈ ಫ್ರೊಪೈಲ್ ಜನರು ಪಬ್ಬು ಡಿಸ್ಕೋ ಅಂತಾ ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರಿರ್ತಾರೆ ಅವರದು ಸಾಹಸ ಮನೋಭಾವ ಏನಾದರೂ ಹೊಸತನ್ನು ಹುಡುಕಬೇಕು ಎನ್ನುವ ಅಭಿಲಾಷೆ ಉಳ್ಳವರು ಅವರಲ್ಲಿ ಅನ್ವೇಷಣಾ ಮನೋಭಾವವಿರುತ್ತದೆ. ಉದಾಹರಣೆಗೆ ಲಾಂಗ್ ರೈಡ್ ಹೋಗುವುದು, ಸ್ಕೂಬಾ ಡೈವಿಂಗ್, ಚಾರಣ, ಹೀಗೆ ಹಲವಾರು. ಇಲ್ಲಿ ನಾವು ಹೇಳ ಹೊರಟಿರುವುದು ಚಾರಣಿಕರ ಕುರಿತು ನಿಜಕ್ಕೂ ಚಾರಣ (ಟ್ರೆಕ್ಕಿಂಗ್) ಎಂದರೇನು ಅದಕ್ಕೆ ಬೇಕಾದ ಮೂಲ ಸೌಕರ್ಯಗಳೇನು, ನಮ್ಮ ಯೋಜನೆಗಳು ಯಾವ ರೀತಿಯಲ್ಲಿರಬೇಕು ಎಂಬಿತ್ಯಾದಿ ಅಂಶಗಳನ್ನು ತಿಳಿದುಕೊಂಡು ಚಾರಣ ಹೊರಟರೆ ಮುಂದೆ ನಮಗೆ ಒದಗುವ ತೊಂದರೆಗಳಿಂದ ನಾವು ಮುಕ್ತವಾಗಬಹುದು ಅದೇನೆಂದು ತಿಳಿಯುವ ಆಸೆ ನಿಮಗಿದ್ರೆ ಅದರ ಕುರಿತು ಮಾಹಿತಿ ಇಲ್ಲಿದೆ ನೋಡಿ
 
ಚಾರಣ ಎನ್ನುವುದು ಒಂದು ಹವ್ಯಾಸ ಇದನ್ನು ಒಂದು ಬಾರಿ ಶುರು ಮಾಡಿದರೆ ಮತ್ತೆ ಮತ್ತೆ ಟ್ರೆಕ್ಕಿಂಗ್ ಹೋಗಬೇಕು ಅನಿಸೋದು ಸಹಜವೇ ಆದರೂ ನೀವು ಒಂದು ವೇಳೆ ಟ್ರೆಕ್ಕಿಂಗ್ ಹೋಗಲು ಬಯಸುತ್ತೀರಿ ಅನ್ನೋದಾದ್ರೆ ಕೆಲವೊಂದಿಷ್ಟು ಮಾಹಿತಿ ತಿಳಿದುಕೊಂಡಿದ್ದರೆ ಉತ್ತಮ. ಬಹಳಷ್ಚು ಜನರು ಅದರಲ್ಲೂ ನಗರವಾಸಿಗಳು ವಿಕೆಂಡ್‌ ಬಂದರೆ ಸಾಕು ಈ ತರಹದ ಯೋಜನೆ ರೂಪಿಸುತ್ತಾರೆ. ಆದರೆ ಅದಕ್ಕೆ ಪೂರಕವಾದ ಮಾಹಿತಿ ಇಲ್ಲದೇ ಕಷ್ಟಪಟ್ಟಿರುವ ಹಲವಾರು ಪ್ರಕರಣಗಳು ನಮ್ಮ ಮುಂದಿದೆ ಒಂದು ವೇಳೆ ನೀವು ಟ್ರೆಕ್ಕಿಂಗ್‌ ಹೋಗಲು ಬಯಸಿದ್ದಲ್ಲಿ ಈ ಮಾಹಿತಿ ನಿಮಗೆ ಉಪಯೋಗವಾಗಬಹುದು.
 
ಬಹಳಷ್ಟು ಜನರಿಗೆ ರಜಾದಿನಗಳಲ್ಲಿ ಚಾರಣ ಮಾಡುವುದು ಒಂದು ತರಹದ ಹವ್ಯಾಸ ಇನ್ನು ಕೆಲವರಿಗೆ ಅದೇ ಅವರ ಕಾಯಕ ಒಂದು ಕ್ಯಾಮರಾ ಹಿಡಿದು ಬೈಕ್ ಏರಿ ಬೇಕಾದ ವಸ್ತುಗಳನ್ನು ಸೇರಿಸಿಕೊಂಡು ಹೊರಟರೆ ಅವರು ಹಿಂತಿರುಗುವುದು ಅವರ ಗುರಿ ಮುಟ್ಟಿದ ಮೇಲೆಯೇ ನಮ್ಮ ದೇಶದಲ್ಲಿ ಹವ್ಯಾಸಿ ಚಾರಣಿಕರು ಸಿಗಬಹುದು ಆದರೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಚಾರಣಿಕರು ಸಿಗುವುದು ವಿರಳ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಾವು ಅವರನ್ನು ಹೆಚ್ಚಾಗಿ ಕಾಣಬಹುದು. ಹಾಗಂತ ನೀವು ಅವರಿಗೆ ಏನು ಕೆಲಸವಿಲ್ಲವಾ ಅಂತಾ ಭಾವಿಸಬೇಡಿ ಅದರಿಂದಾನು ಹಣವನ್ನು ಗಳಿಸಬಹುದು.
 
ನೀವು ಚಾರಣಕ್ಕೆ ತೆರಳಬೇಕು ಎಂದು ನಿಶ್ಚಯಿಸಿದಲ್ಲಿ ಮೊದಲು ನೀವು ಹೋಗುತ್ತಿರುವ ಪ್ರದೇಶ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಕುರಿತು ತಿಳಿದುಕೊಳ್ಳುವುದು ತುಂಬಾನೇ ಮುಖ್ಯ, ಅಲ್ಲದೇ ನೀವು ಹೊರಡುವ ದಿನದಿಂದ ಹಿಂತಿರುಗುವ ದಿನದವರೆಗೆ ನಿಮಗೆ ಏನೇನು ಅಗತ್ಯವಿರುತ್ತದೆ ಎಂಬುದರ ಕುರಿತು ಒಂದು ಚಿಕ್ಕದಾದ ಯೋಜನೆ ರೂಪಿಸಿ. ಅದನ್ನು ಸಿದ್ಧಪಡಿಸಿಕೊಳ್ಳುವುದು ನಿಮಗೆ ಅನುಕೂಲವಾಗಬಹುದು. 
 
ನೀವು ಯಾವ ಪ್ರದೇಶಗಳಿಗೆ ಹೋಗುತ್ತಿದ್ದೀರಿ ಅಲ್ಲಿ ಏನಾದರೂ ಅನುಮತಿ ಪತ್ರಗಳ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ, ಅಷ್ಟೇ ಅಲ್ಲ ನೀವು ಚಾರಣ ಮಾಡುವಾಗ ನೀರಿನ ಬಾಟಲ್‌ಗಳು, ಚಿಕ್ಕದಾದ ಬ್ಯಾಟರಿ ಹಾಗೂ ಮೊಬೈಲ್ ಚಾರ್ಜಿಂಗ್ ಮಾಡಲು ಪವರ್ ಬ್ಯಾಂಕ್, ರಾತ್ರಿ ತಂಗಲು ಚಿಕ್ಕದಾದ ಟ್ರೆಕ್ಕಿಂಗ್ ಟೆಂಟ್‌‌ ಅನ್ನು ಜೊತೆಯಲ್ಲಿ ಒಯ್ಯುವುದು ಉತ್ತಮ. ಅಲ್ಲದೇ ಚಳಿಯಿಂದ ರಕ್ಷಿಸಿಕೊಳ್ಳಲು ಜಾಕೆಟ್‌ಗಳು, ಮಳೆಯಿಂದ ರಕ್ಷಿಸಿಕೊಳ್ಳಲು ರೈನ್ ಕೋಟ್‌ಗಳು, ಚಳಿಗಾಲದಲ್ಲಿ ಬಳಸುವ ಟೋಪಿಗಳು, ಬ್ಯಾಕ್ ಪ್ಯಾಕ್, ಬೆಂಕಿಯ ಅವಶ್ಯಕತೆ ಇದ್ದಾಗ ಹೊತ್ತಿಸಲು ಒಂದು ಚಿಕ್ಕ ಲೈಟರ್ ಇರಿಸಿಕೊಳ್ಳಿ, ಆಕಸ್ಮಿಕವಾಗಿ ಖಾಯಿಲೆ ಅಥವಾ ಗಾಯಗಳಾಗಬಹುದು ಆದ ಕಾರಣ ಯಾವುದಕ್ಕೂ ಅಗತ್ಯವಿರುವ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಒಯ್ಯುವುದು ಸೂಕ್ತ.
 
ನೀವು ಹೋಗುವ ಪ್ರದೇಶ ಬೆಟ್ಟಗುಡ್ಡವಾಗಿದ್ದಲ್ಲಿ ಕ್ಲೈಂಬಿಂಗ್ ಕೀ ಲಾಕ್‌ಗಳು ಮತ್ತು ಕ್ಲೈಂಬಿಂಗ್ ಹಗ್ಗವನ್ನು ಇರಿಸಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ನೀವು ಕಾಡುಗಳಲ್ಲಿ ಸಂಚರಿಸುತ್ತೀರಿ ಎಂದಾದರೆ ಚಾರಣಕ್ಕೆ ಬಳಸುವ ಟ್ರೆಕ್ಕಿಂಗ್ ಪೋಲ್‌ಗಳು ಮತ್ತು ಹ್ಯಾಂಡ್ ಗ್ಲೌಸ್‌ಗಳು, ಚಿಕ್ಕ ವೀಡಿಯೊ ಕ್ಯಾಮರಾ, ದಿಕ್ಸೂಚಿ, ಕಾಲಿಗೆ ಟ್ರೆಕ್ಕಿಂಗ್ ಷೂಗಳು ಇಲ್ಲವೇ ಗಮ್ ಷೂಗಳು ಮತ್ತು GPS ಟ್ರ್ಯಾಕಿಂಗ್ ಮೆಶಿನ್ ಹಾಗೂ ರಕ್ಷಣಾ ಪರಿಕರಗಳನ್ನು ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ಅಲ್ಲದೇ ಅಗತ್ಯವಿರುವಷ್ಟು ಆಹಾರ ಸಾಮಗ್ರಿಗಳನ್ನು ಒಯ್ಯುವುದರಿಂದ ಹಸಿವನ್ನು ನೀಗಿಸಿಕೊಳ್ಳಬಹುದು. ಆದರೆ ಕಾಡುಗಳಲ್ಲಿ ಬೆಟ್ಟ ಗುಡ್ಡಗಳಲ್ಲಿ ಸಿಕ್ಕ ಸಿಕ್ಕ ಹಣ್ಣುಗಳನ್ನು ತಿನ್ನುವುದು ಹೂಗಳ ಸುವಾಸನೆ ನೋಡುವ ತಪ್ಪನ್ನು ಯಾವತ್ತಿಗೂ ಮಾಡಬೇಡಿ ಏಕೆಂದರೆ ಅದರಲ್ಲಿ ವಿಷಯುಕ್ತ ಅಂಶಗಳಿರಬಹುದು. ಹಾಗೆಯೇ ನೀವು ಚಾರಣ ಮಾಡುವಾಗ ದಾರಿ ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ, ಹಾಗಾಗಿ ಹೋಗುವ ದಾರಿಯನ್ನು ಗುರುತು ಮಾಡುವುದು ಫೋಟೋಗಳನ್ನು ತೆಗೆದುಕೊಳ್ಳುವುದು ಮತ್ತು ತುರ್ತು ಸಂಖ್ಯೆಯನ್ನು ನಿಮ್ಮ ಬಳಿ ಇರಿಸಿಕೊಳ್ಳುವುದು ನಿಮಗೆ ಅನುಕೂಲಕವಾಗಬಹುದು.
 
ನೀವು ಹಿಂದೆ ಚಾರಣಕ್ಕೆ ತೆರಳಿದ್ದಲ್ಲಿ ಅಥವಾ ಹಿಂದೆ ಹೋಗಿರುವ ಪ್ರದೇಶಕ್ಕೆ ಇನ್ನೊಮ್ಮೆ ಚಾರಣ ಮಾಡುತ್ತಿದ್ದಲ್ಲಿ ನಿಮಗೆ ಸ್ವಲ್ಪ ಮಟ್ಟಿಗೆ ಅನುಭವವಿರುತ್ತದೆ. ಆದರೆ ಹೊಸ ಪ್ರದೇಶದಲ್ಲಿ ಚಾರಣ ಮಾಡುವಾಗ ಮಾರ್ಗದರ್ಶಕರ ಸಹಾಯ ಪಡೆಯುವುದು ಸೂಕ್ತ. ಸಾಮಾನ್ಯವಾಗಿ ಚಾರಣಕ್ಕೆ ಕನಿಷ್ಟ 2 ಅಥವಾ 5 ಜನರೊಂದಿಗೆ ಪ್ರಯಾಣಿಸುವುದು ಉತ್ತಮ. ಒಬ್ಬರೆ ಚಾರಣಕ್ಕೆ ಹೋಗುವುದು ಎಂದರೆ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡತೆಯೇ ಹಾಗಾಗಿ ತುಸು ಜಾಗರೂಕತೆ ವಹಿಸುವುದು ಮುಖ್ಯ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಗೆ ಕಿರಿಕ್ ಹುಡುಗಿಯ ಎಂಟ್ರಿ