ಸಹ್ಯಾದ್ರಿ ತಪ್ಪಲಿನ ತಾಣ ನಮ್ಮ ಯಾಣ

ಗುರುಮೂರ್ತಿ

ಗುರುವಾರ, 14 ಡಿಸೆಂಬರ್ 2017 (18:03 IST)
ಸಹ್ಯಾದ್ರಿ ತಪ್ಪಲಿನಲ್ಲಿ ದಟ್ಟವಾದ ಸಮೃದ್ಧ ಹಚ್ಚ ಹಸಿರಿನ ಕಾನನದ ನಡುವೆ ಕಂಗೊಳಿಸುತ್ತಿರುವ ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸ ತಾಣಗಳಲ್ಲಿ ಒಂದಾಗಿದೆ. ಪ್ರಕೃತಿಯ ಮಧ್ಯೆ ರಜೆಯ ಮಜವನ್ನು ಅನುಭವಿಸುವುದರ ಜೊತೆಗೆ ಪೂಣ್ಯ ಕ್ಷೇತ್ರದ ದರ್ಶನವೂ ಮಾಡಬೇಕು ಎನ್ನುವವರಿಗೆ ಈ ಸ್ಥಳ ಪ್ರಶಸ್ತವಾಗಿದೆ. 
ಯಾಣ ಒಂದು ಧಾರ್ಮಿಕ ಸ್ಧಳವಾಗಿದ್ದು ಪ್ರವಾಸಿ ತಾಣವೂ ಹೌದು. ಇದು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಯಾಣದ ಸೂತ್ತಲೂ ಸುಣ್ಣದ ಕಲ್ಲಿನಲ್ಲಿ (ಕಪ್ಪು ಶಿಲೆಯಲ್ಲಿ) ನಿರ್ಮಿತವಾದ ಗುಹೆ, ಗುಹೆಯನ್ನು ನೋಡುವುದೇ ಒಂದು ಸೊಬಗು. ಈ ಕ್ಷೇತ್ರವು ಪುರಾಣದಲ್ಲಿ ಬರುವ ಭಸ್ಮಾಸುರ ಕಥೆಯನ್ನು ಸಾರುವ ಸ್ಥಳವಾಗಿದೆ. ಇಲ್ಲಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಾಗಿರುವ ಕಾರಣ ಇಲ್ಲಿನ ಮಣ್ಣು ಸುಟ್ಟಿರುವ ಮತ್ತು ಭಸ್ಮದ ರೂಪದಲ್ಲಿರುವುದು ವಿಶೇಷ. ಈ ಸ್ಥಳದಲ್ಲಿ ಭೈರವೇಶ್ವರ ಶಿಖರ, ಮೋಹಿನಿ ಶಿಖರ ಹಾಗೂ ಭೈರವೇಶ್ವರ ದೇವಸ್ಥಾನ ಪ್ರಮುಖ ಆಕರ್ಷಣೆಯ ಕೇ೦ದ್ರಬಿ೦ದುಗಳಾಗಿವೆ. ಯಾಣದ ಬಂಡೆಯ ಮೇಲೆಲ್ಲ ಸಾವಿರಾರು ಹೆಜ್ಜೇನಿನ ಗೂಡುಗಳು ಇರುವುದನ್ನು ನೀವು ಕಾಣಬಹುದಾಗಿದೆ. ಅಲ್ಲದೇ ಆ ಈ ಹೆಬ್ಬಂಡೆಯಿಂದ ಇಳಿದು ಬಂದ ಜಲವೇ ಮುಂದೆ ಚಂಡಿಕಾ ನದಿಯಾಗಿ ಅಘನಾಶಿನಿ ನದಿಯನ್ನು ಸೇರುತ್ತದೆ ಎಂದು ಹೇಳಲಾಗುತ್ತದೆ.
 
ಪೌರಾಣಿಕ ಹಿನ್ನಲೆ
 
ಹಿಂದೂ ಪುರಾಣಗಳ ಪ್ರಕಾರ ಭಸ್ಮಾಸುರ ಎಂಬ ರಾಕ್ಷಸನು ಶಿವನ ಕುರಿತು ಘೋರವಾದ ತಪಸ್ಸನ್ನು ಆಚರಿಸುತ್ತಾನೆ, ಇದರಿಂದ ಪ್ರಸನ್ನಗೊಂಡ ಶಿವನು ಯಾವ ವರ ಬೇಕು ಎಂದು ಕೇಳಿದಾಗ ನಾನು ಯಾವ ವಸ್ತುವಿನ ಮೇಲೆ ಕೈ ಇಡುತ್ತೇನೋ ಅವೆಲ್ಲವೂ ಭಸ್ಮವಾಗಬೇಕು ಎಂಬಂತ ವರವನ್ನು ಕೇಳಿ ಪಡೆಯುತ್ತಾನೆ. ಅದನ್ನು ಪರಿಕ್ಷೀಸಲು ಭಸ್ಮಾಸುರನು ಶಿವನ ಮೇಲೆ ಕೈಯಿಡಲು ಮುಂದಾದಾಗ ಶಿವನು ಓಡತೊಡಗುತ್ತಾನೆ ಆಗ ಭಗವಾನ್ ವಿಷ್ಟುವು ಮೋಹಿನಿ ಅವತಾರ ತಾಳಿ ಭಸ್ಮಾಸುರನನ್ನು ತನ್ನತ್ತ ಆಕರ್ಷಿಸಿದಾಗ ಭಸ್ಮಾಸುರನು ಮೋಹಿನಿಯ ರೂಪಕ್ಕೆ ಮರುಳಾಗಿ ಅವಳನ್ನು ಹಿಂಬಾಲಿಸುತ್ತಾನೆ. ಆಗ ಮೋಹಿನಿ ಅವತಾರದಲ್ಲಿದ್ದ ವಿಷ್ಣುವು ಭಸ್ಮಾಸುರನಿಗೆ ತಾನು ನಿನಗೆ ಸಿಗಬೇಕಾದರೆ ತಾನು ಮಾಡಿದ ಹಾಗೇ ಮಾಡಬೇಕು ಎಂಬ ಷರತ್ತನ್ನು ವಿಧಿಸುತ್ತಾನೆ ಮೋಹಿನಿಯ ರೂಪದಲ್ಲಿರುವುದು ವಿಷ್ಣು ಎಂದು ತಿಳಿಯದೇ ಭಸ್ಮಾಸುರನು ಆ ಷರತ್ತಿಗೆ ಸಮ್ಮತಿಸುತ್ತಾನೆ. ಮೋಹಿನಿಯು ಇದೇ ಅವಕಾಶವನ್ನು ಉಪಯೋಗಿಸಿಕೊಂಡು ತನ್ನ ಕೈಯನ್ನು ತನ್ನ ತಲೆಯ ಮೇಲೆ ಇರಿಸಿಕೊಳ್ಳುವ ಮೂಲಕ ಭಸ್ಮಾಸುರನು ತನ್ನ ಕೈಯನ್ನು ಅವನ ತಲೆಯ ಮೇಲೆ ಇರಿಸಿಕೊಳ್ಳುವಂತೆ ಮಾಡುತ್ತಾಳೆ. ಇದರಿಂದಾಗಿ ಅವನೇ ಭಸ್ಮವಾಗುತ್ತಾನೆ. ಇದು ಈ ಸ್ಥಳದ ಪೌರಾಣಿಕ ಹಿನ್ನೆಲೆಯಾಗಿದ್ದು ಇಂದಿಗೂ ಈ ಕ್ಷೇತ್ರದಲ್ಲಿ ಮೋಹಿನಿ ಶಿಖರ ಮತ್ತು ಭೈರವ ಶಿಖರ ಬೆಳೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತದೆ. ಭಸ್ಮಾಸುರನಿಂದ ಶಿವನು ತಪ್ಪಿಸಿಕೊಳ್ಳುವುದಕ್ಕೆ ಓಡಿದ ಗುಹೆಯೇ ಇಂದು ಭೈರವೇಶ್ವರ ದೇವಸ್ಥಾನವಾಗಿದೆ. ಇದಕ್ಕೆ ಪುರಾವೆ ಎಂಬಂತೆ ದೇವಸ್ಥಾನದ ಒಳಗೆ ಶಿವನ ಜಟೆಯ ರೀತಿಯಲ್ಲಿ ಕಲ್ಲಿನ ಮೇಲೆ ಆಕಾರ ಮೂಡಿದ್ದು ಅಲ್ಲಿಂದ ವರ್ಷವಿಡಿ ನೀರು ಜೀನುಗುವುದು ಪವಾಡವೆಂದೇ ಹೇಳಬಹುದು.
ಯಾಣಕ್ಕೆ ಹೋಗಲು ದಾರಿ
ಈ ಯಾಣ ಕ್ಷೇತ್ರಕ್ಕೆ ಹೋಗಲು ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದ್ದು ಬೆಂಗಳೂರಿನಿಂದ ಯಾಣ ಸುಮಾರು 459 ಕಿ.ಮೀ ದೂರದಲ್ಲಿದೆ. ಅಲ್ಲದೇ ಶಿವಮೊಗ್ಗದಿಂದ 187 ಕಿ.ಮೀ, ಹುಬ್ಬಳ್ಳಿಯಿಂದ 157 ಕಿ.ಮೀ ದೂರದಲ್ಲಿದೆ. ಇನ್ನುಳಿದಂತೆ ಗೋಕರ್ಣದಿಂದ 50 ಕಿ.ಮೀ ಹಾಗೂ ಕಾರವಾರದಿಂದ 60 ಕಿ.ಮೀ, ಅಂಕೋಲಾದಿಂದ 56 ಕಿ.ಮೀ ಮತ್ತು ಕುಮಟಾದಿಂದ 28 ಕಿ.ಮೀ ದೂರದಲ್ಲಿದೆ.
 
ಯಾಣಕ್ಕೆ ಹೋಗಲು ಉತ್ತಮ ಸಮಯ
 
ಸೆಪ್ಟೆ೦ಬರ್‌ನಿಂದ ಮಾರ್ಚ್ ತಿ೦ಗಳವರೆಗಿನ ಅವಧಿಯು ಈ ಸ್ಥಳಕ್ಕೆ ಭೇಟಿ ನೀಡಲು ಅತ್ಯ೦ತ ಉತ್ತಮ ಸಮಯಾವಾಗಿದೆ. ಯಾಣ ಕ್ಷೇತ್ರವು ಕಾನನದ ನಡುವೆ ಇರುವ ಕಾರಣ ಮಳೆಗಾಲದ ಅವಧಿಯಲ್ಲಿ ಪ್ರವಾಸ ಕೈಗೊಳ್ಳುವುದು ಸ್ವಲ್ವ ಕಷ್ಟಕರವೇ ಏಕೆಂದರೆ ಮಳೆಗಾಲದ ಅವಧಿಗಳಲ್ಲಿ ಕಾಡು ದಾರಿಯ ಪ್ರಯಾಣ ಅಷ್ಟೊಂದು ಸುರಕ್ಷಿತವಾಗಿರುವುದಿಲ್ಲ ಹಾಗೂ ಯಾಣದ ಗುಹೆಗಳಲ್ಲಿ ಚಾರಣವನ್ನು ಕೈಗೊಳ್ಳುವುದು ಸಹ ಮಳೆಗಾಲದಲ್ಲಿ ತುಂಬಾ ಅಪಾಯಕಾರಿ. ಹೀಗಾಗಿ, ಮಳೆಗಾಲದ ಅವಧಿಯಲ್ಲಿ ಯಾಣಕ್ಕೆ ಪ್ರವಾಸವನ್ನು ಕೈಗೊಳ್ಳದಿರುವುದೇ ಕ್ಷೇಮ.
 
ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವುದರ ಜೊತೆಗೆ ಮನಸ್ಸಿನ ಬೇಸರ ಕಳೆಯಬೇಕು ಮತ್ತು ರಜೆಯ ಮಜಾವನ್ನು ಸವಿಯಬೇಕು ಎಂದು ನೀವು ಬಯಸಿದರೆ ಯಾಣ ಒಂದು ಉತ್ತಮ ಸ್ಥಳವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಗ್ ಬಾಸ್ ಕನ್ನಡ: ಸಂಯುಕ್ತಾ ಕಿರಿಕ್ ಗೆ ಮನೆಮಂದಿ ಜತೆಗೆ ರೊಚ್ಚಿಗೆದ್ದ ಅಭಿಮಾನಿಗಳು