Publish Date: Wed, 10 Mar 2021 (09:33 IST)
Updated Date: Wed, 10 Mar 2021 (09:35 IST)
ಬೆಂಗಳೂರು: ಚಿನ್ನಾಭರಣ ತಮ್ಮದಾಗಿಸಿಕೊಳ್ಳುವ ದುರಾಸೆಯಿಂದ ಸ್ವಂತ ದೊಡ್ಡಮ್ಮನನ್ನೇ ಯುವತಿಯೊಬ್ಬಳು ಹತ್ಯೆ ಮಾಡಿದ ಘಟನೆ ಅಶೋಕನಗರದಲ್ಲಿ ನಡೆದಿದೆ.
28 ವರ್ಷದ ಶಬಾನ ಬಂಧಿತೆ. ಈಕೆ ಮಾರ್ಚ್ 4 ರಂದು 62 ವರ್ಷದ ತನ್ನ ದೊಡ್ಡಮ್ಮನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೆ, ಆಕೆಯ ಬಳಿಯಿದ್ದ ಅಪಾರ ಚಿನ್ನಾಭರಣಗಳನ್ನು ದೋಚಿದ್ದಳು.
ಆಗಾಗ ದೊಡ್ಡಮ್ಮನ ಮನೆಗೆ ಬರುತ್ತಿದ್ದ ಶಬಾನ ಆಕೆಯ ಬಳಿ ಚಿನ್ನಾಭರಣಗಳಿರುವುದನ್ನು ಗಮನಿಸಿದ್ದಳು. ಘಟನೆ ದಿನ ಮೃತ ಮಹಿಳೆಯ ಮಗ ಮನೆಯಲ್ಲಿರಲಿಲ್ಲ. ಆ ದಿನವನ್ನೇ ನೋಡಿಕೊಂಡು ಮನೆಗೆ ಬಂದ ಶಬಾನ ದೊಡ್ಡಮ್ಮನ ಕುತ್ತಿಗೆಯ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ.
ಕೆಲವು ಹೊತ್ತಿನ ಬಳಿಕ ಮಗ ಮನೆಗೆ ಬಂದಾಗ ಕೃತ್ಯ ಬಯಲಿಗೆ ಬಂದಿದೆ. ಕೃತ್ಯ ನಡೆದ ಮನೆಯ ಆಸುಪಾಸಿನ ಸಿಸಿಟಿವಿ ಕ್ಯಾಮರಾ ಆಧರಿಸಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.