ಬೆಂಗಳೂರು: ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ತೀವ್ರ ಅಸಮಾಧಾನ ಕೇಳಿಬಂದಿದೆ. ಲಕ್ಷಾಂತರ ರೂಪಾಯಿ ದಡಿಯುವವರಿಗೂ ಫ್ರೀ ಬಸ್ ಯಾಕೆ ಕೊಡಬೇಕು ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ಹಣ ಸಾಕಾಗುತ್ತಿಲ್ಲ ಎಂದು ಈ ಹಿಂದೆಯೂ ಹಲವು ಬಾರಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಶಾಸಕಾಂಗ ಸಭೆಯಲ್ಲಿ ಶಾಸಕರು ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಸ್ವರವೆತ್ತಿದ್ದಾರೆ.
ಶ್ರೀಮಂತರ ಮನೆಗೂ ಉಚಿತ 200 ಯೂನಿಟ್ ವಿದ್ಯುತ್, ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಮಹಿಳೆಯರಿಗೂ ಫ್ರೀ ಬಸ್ ಕೊಡಬೇಕಾ ಎಂದು ಶಾಸಕರು ಪ್ರಶ್ನೆ ಎತ್ತಿದ್ದಾರೆ. ಇಂತಹ ಯೋಜನೆಗಳು ಬೊಕ್ಕಸಕ್ಕೆ ಹೊರೆ ಎಂದಿದ್ದಾರೆ.
ಹೀಗಾಗಿ ಗ್ಯಾರಂಟಿ ಯೋಜನೆಗಳು ಕೇವಲ ಅರ್ಹರಿಗೆ ಮಾತ್ರ ದೊರಕುವಂತೆ ಆಗಬೇಕು. ಇದರಿಂದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುವುದೂ ತಪ್ಪುತ್ತದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.