ಕಾಲೇಜು ಮಕ್ಕಳ ವಿದ್ಯಾಭ್ಯಾಸಕ್ಕೆಂದು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿರುವ ಕಟ್ಟಡ ಜಾಗ ಈಗ ಕುಡುಕರ, ಪುಂಡರಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ವಿದ್ಯಾರ್ಜನೆ ನಡೆಯಬೇಕಿದ್ದ ಸ್ಥಳದಲ್ಲಿ ರಾತ್ರಿಹೊತ್ತು ಮದ್ಯರಾಧನೆ ನಡೆಯುತ್ತಿದೆ. ಹೀಗಾಗಿ ವಿದ್ಯಾಕೇಂದ್ರವೊಂದು ಮದ್ಯಕೇಂದ್ರವಾದಂತಾಗುತ್ತಿರುವುದು ಪಾಲಕರಲ್ಲಿ ಕಳವಳವನ್ನುಂಟು ಮಾಡುತ್ತಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಪ್ರಥಮ ದರ್ಜೆಯ ಕಾಲೇಜಿನ ಆವರಣಕ್ಕೆ ಕಾಲಿಡಲು ವಿದ್ಯಾರ್ಥಿಗಳು ಹಿಂಜರಿಯುವಂತಾಗಿದೆ. ಕಾಲೇಜು ಒಳ ಹೊರಗೆ ಎಲ್ಲಾ ಕಡೆ ಮದ್ಯದ ಬಾಟಲ್, ಗಿಡಗಂಟೆ ಬೆಳೆದು ಪೊದೆ ನಿರ್ಮಾಣವಾಗಿ ವಿಷ ಜಂತುಗಳ ಹಾವಳಿ ಕೂಡ ಹೆಚ್ಚಾಗಿದೆ. ಅಲ್ಲದೆ ಅಲ್ಲಿಗೆ ಮದ್ಯಪಾನ ಮಾಡಲು ಬರುವ ಪುಂಡರು ಕಟ್ಟಡದ ಕಿಟಕಿ ಗಾಜುಗಳ ಮೇಲೆ ತಮ್ಮ ಪೌರುಷ ತೋರಿ ಗಾಜು, ವಾಟರ್ ಸಿಂಟೆಕ್ಸ್ ಸೇರಿದಂತೆ ಪೈಪು ಒಡೆದು ಹಾಳುಗೆಡವಿದ್ದಾರೆ.
ಇದರಿಂದ ದಿನೇ ದಿನೇ ವಿದ್ಯಾರ್ಥಿಗಳ ಸಂಖ್ಯೆ ಕೂಡ ಕ್ಷೀಣಿಸುತ್ತಿದ್ದು, ಆಡಳಿತ ಮಂಡಳಿ ನಿರ್ಲಕ್ಷ್ಯದ ವಿರುದ್ಧ ನಾಗರಿಕರು, ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.