ಚಿತ್ರದುರ್ಗ: ಅಜ್ಜಿಗೆ ಫೋನ್ ಮಾಡಿದ ತಪ್ಪಿಗೆ ಬಾಲಕನನ್ನು ಚಿತ್ರದುರ್ಗದ ಸಂಸ್ಕೃತ ಪಾಠ ಶಾಲೆಯ ಶಿಕ್ಷಕ ವೀರೇಶ್ ಹೀರೇಮಠ್ ಎಂಬಾತ ಕಾಲಿನಿಂದ ಒದ್ದು ಕ್ರೌರ್ಯ ಮೆರೆದಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯವಿದೆ. ಈ ದೇವಾಲಯಕ್ಕೆ ಸೇರಿದ ಸಂಸ್ಕೃತ, ವೇದ, ವೀರಶೈವಾಗಮನ ಶಾಲೆಯಲ್ಲಿ ಘಟನೆ ನಡೆದಿದೆ.
ಇಲ್ಲಿ ಸುಮಾರು 30 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ. ತನ್ನ ಅಜ್ಜಿಗೆ ಬಾಲಕ ಕರೆ ಮಾಡಿದ ತಪ್ಪಿಗೆ ಆತನಿಗೆ ವಾಚಮಗೋಚರವಾಗಿ ಬೈದಿದ್ದಲ್ಲದೆ, ನೆಲಕ್ಕೆ ಕುಕ್ಕಿ, ಕಾಲಿನಿಂದ ಒದ್ದು ಶಿಕ್ಷಕ ವೀರೇಶ್ ಅಮಾನುಷವಾಗಿ ನಡೆದುಕೊಂಡಿದ್ದಾನೆ.
ಒದೆ ತಾಳಲಾರದೇ ಬಾಲಕ ತಪ್ಪಾಯ್ತು ಗುರೂಜಿ ಬಿಟ್ಬಿಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ವೀರೇಶ್ ಮನಸ್ಸು ಕರಗಲಿಲ್ಲ. ಬೇರೆ ಬಾಲಕರ ಮುಂದೆಯೇ ಆತನನ್ನು ಎಳೆದಾಡಿ ಮಾರಣಾಂತಿಕವಾಗಿ ಒದ್ದು ಹಲ್ಲೆ ನಡೆಸಿದ್ದಾನೆ.
ಘಟನೆ ವಿಡಿಯೋ ವೈರಲ್ ಆಗುತ್ತಿದ್ದಂತೇ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಈ ವೇದ ಶಾಲೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ತಹಶೀಲ್ದಾರ್, ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.