Publish Date: Wed, 25 Feb 2026 (14:25 IST)
Updated Date: Wed, 25 Feb 2026 (14:27 IST)
ಬೆಂಗಳೂರು: ವಿಧಾನಸಭೆಯಲ್ಲಿ ಹೇಳಿದ್ದು ಒಂದು ಲೆಕ್ಕ ಈಗ ಹೇಳ್ತಿರೋದು ಒಂದು ಲೆಕ್ಕ ಎಂದು ಸರ್ಕಾರಿ ನೇಮಕಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಸರ್ಕಾರೀ ಹುದ್ದೆಗೆ ನೇಮಕಾತಿ ಮಾಡುವಂತೆ ಯುವ ಜನತೆ ಪ್ರತಿಭಟನೆ ನಡೆಸಿತ್ತು. ಇದರ ಬೆನ್ನಲ್ಲೇ ಇದೆಲ್ಲಾ ಬಿಜೆಪಿ ಸರ್ಕಾರ ಮಾಡಿದ ತಪ್ಪಿನ ಫಲ. ನಮ್ಮ ಸರ್ಕಾರ 40,000 ಹುದ್ದೆಗಳಿಗೆ ನೇಮಕಾತಿ ಮಾಡಿದೆ ಎಂದಿದ್ದರು. ಇದಕ್ಕೆ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.
ವಿಧಾನಸಭೆಯಲ್ಲಿ ನಿಮ್ಮ ಕಾಂಗ್ರೆಸ್ ಸರ್ಕಾರವೇ ನೀಡಿದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ನಿಮ್ಮ ಅಧಿಕಾರಾವಧಿಯ 3 ವರ್ಷಗಳಲ್ಲಿ ಪೂರ್ಣಗೊಂಡಿರುವ ಸರ್ಕಾರಿ ನೇಮಕಾತಿ ಕೇವಲ 8,157! ಆದರೆ ನೀವೇ ಜನರ ಮುಂದೆ, 40,000 ಹುದ್ದೆ ಭರ್ತಿ ಮಾಡಿದ್ದೇವೆ ಎಂದು ಹಸಿ ಸುಳ್ಳು ಹೇಳುವುದು ರಾಜ್ಯದ ನಿರುದ್ಯೋಗಿ ಯುವಜನತೆಗೆ ಮಾಡುತ್ತಿರುವ ನೇರ ವಂಚನೆಯಲ್ಲವೇ?
ಸುಳ್ಳಿನ ಬಂಡಿ ಎಂದಿಗೂ ಶಾಶ್ವತವಲ್ಲ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ! ಸದನದ ಒಳಗೊಂದು ಮಾಹಿತಿ, ಹೊರಗೆ ಸುಳ್ಳಿನ ಪ್ರದರ್ಶನ. ಇನ್ನೂ ಎಷ್ಟು ದಿನ ಜನರನ್ನು ವಂಚಿಸುವಿರಿ? ಎಂದು ಪ್ರಶ್ನೆ ಮಾಡಿದ್ದಾರೆ.