Select Your Language

Notifications

webdunia
webdunia
webdunia
webdunia

ಶಿವಮೊಗ್ಗದಲ್ಲಿ ವಿದ್ಯಾರ್ಥಿ ಮರ್ಡರ್: ಕುಟುಂಬಸ್ಥರಿಗೆ 15 ಲಕ್ಷ ಪರಿಹಾರ, ಯಾರನ್ನೂ ಬಿಡಲ್ಲ ಎಂದ ಸಿಎಂ

Siddaramaiah
ಬೆಂಗಳೂರು: ಶಿವಮೊಗ್ಗದಲ್ಲಿ ಅನ್ಯಕೋಮಿನ ಅಪ್ರಾಪ್ತರಿಂದ ಕೊಲೆಗೀಡಾದ ಎಸ್ಎಸ್ಎಲ್ ಸಿ ವಿದ್ಯಾರ್ಥಿ ಸಂಕೇತ್ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ 15 ಲಕ್ಷ ರೂ. ಪರಿಹಾರ ಹಣ ಘೋಷಿಸಿದೆ. ಇನ್ನು, ಸಂಕೇತ್ ಸಾವಿಗೆ ಕಾರಣರಾದವರನ್ನು ಸುಮ್ಮನೇ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಮೊಗ್ಗದ ಸೂಳೆಬೈಲಿನಲ್ಲಿ ಸ್ನೇಹಿತನ ಜೊತೆ ಜಗಳವಾಡುತ್ತಿದ್ದಾಗ ಬಿಡಿಸಲು ಹೋದ ಸಂಕೇತ್ ನ ಎದೆಗೆ ಆರೋಪಿಗಳು ಒದ್ದಿದ್ದರು. ಪರಿಣಾಮ ಆತ ಸಾವನ್ನಪ್ಪಿದ್ದ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ‘ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನೆರವಾಗುವುದರ ಜೊತೆಗೆ, ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬ ಅಪರಾಧಿಗೂ ಕಾನೂನಿನ ಮೂಲಕ ತಕ್ಕ ಶಿಕ್ಷೆಯಾಗುವಂತೆ ಕ್ರಮವಹಿಸಿ, ಆತನ ಸಾವಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಕೊಲೆಯಲ್ಲಿ ಭಾಗಿಯಾದವರು ಇನ್ನೂ ಚಿಕ್ಕಪ್ರಾಯದ ಹುಡುಗರು ಎಂದು ಕೇಳಿ ದಿಗ್ಭ್ರಮೆಯಾಯಿತು.

ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಂಡು, ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ, ಹೀಗೆ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವುದು ದುರದೃಷ್ಟಕರ.

ಕೊಲೆಯ ಹಿಂದಿನ ಉದ್ದೇಶವೇನೇ ಇರಲಿ, ಕೊಲೆಗೈದವರು ಯಾರೇ ಆಗಿರಲಿ, ಅವರನ್ನು ಕಾನೂನಿನ ಮೂಲಕ ಹೆಡೆಮುರಿ ಕಟ್ಟಿ, ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಎಸಗುವ ಮುನ್ನ ನೂರು ಬಾರಿ ಯೋಚಿಸಬೇಕಾದಂತಹ ಸ್ಥಿತಿ ನಿರ್ಮಾಣ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ.

ಬಾಲ್ಯದಲ್ಲೇ ದ್ವೇಷ, ಹಿಂಸೆ, ಅಪರಾಧ ಕೃತ್ಯಗಳ ದುರ್ಬುದ್ದಿ ಬೆಳೆಸಿಕೊಳ್ಳುವುದು ಅತ್ಯಂತ ಅಪಾಯಕಾರಿ. ಇಂತಹ ಮನಸ್ಥಿತಿಯಿರುವವರು ದುಶ್ಚಟಗಳಿಗೆ ದಾಸರಾದರೆ ಪರಿಸ್ಥಿತಿ ಕೈಮೀರಿ ಹೋಗುವುದು ಖಚಿತ. ಪೋಷಕರು ಸಹ ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು, ಮಕ್ಕಳು ಹಾದಿ ತಪ್ಪಿದ್ದರೆ ತಿದ್ದಿ ಬುದ್ದಿ ಹೇಳಬೇಕು.

ಶಾಲೆಯ ಸುತ್ತಮುತ್ತ ಕಾನೂನು ಬಾಹಿರ ಕೃತ್ಯಗಳು ನಡೆಯದಂತೆ ಆಡಳಿತ ಮಂಡಳಿ ನಿಗಾ ವಹಿಸಬೇಕು. ಅಗತ್ಯಬಿದ್ದರೆ ಪೊಲೀಸರ ನೆರವನ್ನು ಪಡೆಯಬೇಕು.

ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬವನ್ನು ಸಂತೈಸುವ ಉದ್ದೇಶದಿಂದ ಮೃತನ ಪೋಷಕರಿಗೆ ಸರ್ಕಾರದ ವತಿಯಿಂದ 15 ಲಕ್ಷ ಪರಿಹಾರವನ್ನು ನೀಡಲಾಗುವುದು. ಈ ದುಷ್ಕೃತ್ಯ ಎಸಗಿದ ಎಲ್ಲರನ್ನೂ ಈಗಾಗಲೇ ಬಂಧಿಸಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ವಾಗ್ದಾನವನ್ನು ಕೂಡ ಆ ನೊಂದ ಕುಟುಂಬಕ್ಕೆ ಈ ವೇಳೆ ನೀಡುತ್ತಿದ್ದೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೇಮಕಾತಿಗಾಗಿ ಪ್ರತಿಭಟನೆ ಮಾಡಿದ್ದ ಯುವಕರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ