Publish Date: Wed, 08 Jul 2026 (15:00 IST)
Updated Date: Wed, 08 Jul 2026 (15:02 IST)
ಬೆಂಗಳೂರು: ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಯೋಗ್ಯ ವ್ಯಕ್ತಿ ವಿಧಾನಪರಿಷತ್ತಿಗೆ ಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ವಿಧಾನಸೌಧವು ಪ್ರಜಾಪ್ರಭುತ್ವದ ದೇಗುಲ ಎಂದು ನಂಬಿದ್ದೇವೆ. ನಾಡಿನ ಆಗುಹೋಗು, ಜ್ವಲಂತ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚೆ ಆಗಲು ಯೋಗ್ಯ ವ್ಯಕ್ತಿಗಳು ಆಯ್ಕೆಯಾಗಿ ಬರಬೇಕು ಎಂಬ ಅಪೇಕ್ಷೆ ಜನಸಾಮಾನ್ಯರದು ಎಂದು ತಿಳಿಸಿದರು.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಇಂದು ಮಾತನಾಡಿದ ಅವರು, ಈಚಿನ ದಿನಗಳಲ್ಲಿ ತಮ್ಮ ರಾಜಕೀಯ ಚಪಲ, ರಾಜಕೀಯ ಚಟಕ್ಕಾಗಿ ವಿಧಾನಪರಿಷತ್ತಿಗೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹಣದ ಅಹಂನಿಂದ ಚುನಾವಣೆ ಗೆಲ್ಲುತ್ತೇವೆಂಬ ಭ್ರಮೆಯಿಂದ ಸ್ಪರ್ಧಿಸುವುದನ್ನು ನೋಡುತ್ತಿದ್ದೇವೆ ಎಂದು ತಿಳಿಸಿದರು. ಆಗ್ನೇಯ ಪದವೀಧರ ಕ್ಷೇತ್ರವನ್ನು ಬಿಜೆಪಿ 8 ಬಾರಿ ನಿರಂತರವಾಗಿ ಪ್ರತಿನಿಧಿಸಿದೆ. ಪದವೀಧರ ಕ್ಷೇತ್ರ, ಶಿಕ್ಷಣ ಕ್ಷೇತ್ರವು ಅತ್ಯಂತ ಪ್ರಮುಖವಾದುದು. ವಿಧಾನಪರಿಷತ್ತಿನಲ್ಲಿ ಸೂಕ್ತ ವ್ಯಕ್ತಿ ಈ ಕ್ಷೇತ್ರಗಳನ್ನು ಪ್ರತಿನಿಧಿಸಬೇಕು ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಒಬ್ಬ ಪ್ರಾಮಾಣಿಕ ಕಾರ್ಯಕರ್ತ, ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ದಶಕಗಳಿಂದ ಸೇವೆ ಮಾಡುತ್ತಿರುವ ಸಮಾಜಮುಖಿಯಾಗಿ ಕೆಲಸ ಮಾಡುವ ಪ್ರಾಮಾಣಿಕ ವ್ಯಕ್ತಿ ಕೆ.ಎಂ.ಸುರೇಶರನ್ನು ಎನ್‍ಡಿಎ ಅಭ್ಯರ್ಥಿಯಾಗಿ ಘೋಷಿಸಿದೆ. ಚುನಾವಣೆಗೆ ಹೆಚ್ಚು ದಿನಗಳು ಉಳಿದಿಲ್ಲ. ಮತದಾರರ ಸಂಖ್ಯೆ 50 ಸಾವಿರ ದಾಟುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕೆ.ಎಂ.ಸುರೇಶ ಅವರು 5 ಜಿಲ್ಲೆಗಳಲ್ಲಿ ಪ್ರವಾಸ ಮಾಡಬೇಕಿದೆ. 33 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಈ ಕ್ಷೇತ್ರವನ್ನು ಸುತ್ತಬೇಕಿದೆ. ಚಿತ್ರದುರ್ಗ ಜಿಲ್ಲೆಯ ಮುಖಂಡರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದ್ದಾಗಲೂ ಶಿಕ್ಷಣ- ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತ ಬಂದಿದೆ. ಪರಿಸ್ಥಿತಿ ಬದಲಾಗುತ್ತಿದೆ. ಆಡಳಿತ ಪಕ್ಷವು ಹಲವು ತಿಂಗಳಿನಿಂದ ಮತದಾರರನ್ನು ನೋಂದಣಿ ಮಾಡಿಸುತ್ತ ಬಂದಿದೆ. ಇನ್ನು ಕೆಲವು ತಿಂಗಳು ಬಾಕಿ ಇದ್ದು ನಾವು ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಾಗಿದೆ ಎಂದು ಹೇಳಿದರು.
ಚಂದ್ರಣ್ಣ ಅವರು ನನ್ನನ್ನು ಭವಿಷ್ಯದ ಮುಖ್ಯಮಂತ್ರಿ ಎಂಬ ಮಾತನ್ನು ಪ್ರೀತಿಯಿಂದ ವಿಶ್ವಾಸವಿಟ್ಟು ಹೇಳಿದ್ದಾರೆ. ಅದುವೇ ನಮಗೆ ಸಮಸ್ಯೆ ಆಗಿದೆ. ನಾನು ಒಬ್ಬ ರಾಜ್ಯ ಅಧ್ಯಕ್ಷನಾಗಿ ಕಿವಿಮಾತು ಹೇಳಲು ಬಯಸುತ್ತೇನೆ. ಯಾರು ಮುಖ್ಯಮಂತ್ರಿ ಆಗಬೇಕೆಂಬುದು ಮುಖ್ಯವಲ್ಲ; ರಾಜ್ಯದ ಮತದಾರರು ಈ ಭ್ರಷ್ಟ- ಜನವಿರೋಧಿ, ಹಿಂದೂ ವಿರೋಧಿ ಸರಕಾರದ ವಿರುದ್ಧ, ಪರಿಶಿಷ್ಟ ಜಾತಿ, ವರ್ಗದ ದುಡ್ಡನ್ನು ಕೊಳ್ಳೆ ಹೊಡೆಯುವ ಕಾಂಗ್ರೆಸ್ ಸರಕಾರದ ವಿರುದ್ಧ ಬೇಸತ್ತಿದ್ದಾರೆ. ಹಾಗಾಗಿ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ