Publish Date: Mon, 31 Aug 2026 (17:45 IST)
Updated Date: Mon, 31 Aug 2026 (17:50 IST)
ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಆರ್‌ಟಿಸಿ (BMTC) ಬಸ್ ನಿಲ್ದಾಣಗಳಿಗೆ ರಾಜ್ಯ ಸಾರಿಗೆ ಸಚಿವ ಭೈರತಿ ಸುರೇಶ್ ಅವರು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸ್ವತಃ ಬಸ್ ನಿಲ್ದಾಣದಲ್ಲಿ ಸಂಚರಿಸಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದ ಸಚಿವರು, ಸ್ಥಳದಲ್ಲೇ ಹಲವು ಕುಂದುಕೊರತೆಗಳಿಗೆ ಪರಿಹಾರ ಸೂಚಿಸಿದರು.
ಮೆಜೆಸ್ಟಿಕ್ ಕ್ಲಿನಿಕ್‌ನಲ್ಲಿ ವೈದ್ಯರಿಲ್ಲದ್ದಕ್ಕೆ ಖಡಕ್ ಸೂಚನೆ
ಬಸ್ ನಿಲ್ದಾಣದ ಪರಿಶೀಲನೆ ವೇಳೆ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ 'ನಮ್ಮ ಕ್ಲಿನಿಕ್'ಗೆ (ಪ್ರಥಮ ಚಿಕಿತ್ಸಾ ಕೇಂದ್ರ) ಭೇಟಿ ನೀಡಿದಾಗ, ಅಲ್ಲಿ ವೈದ್ಯರು ಗೈರುಹಾಜರಾಗಿದ್ದು ಸಚಿವರ ಗಮನಕ್ಕೆ ಬಂದಿದೆ. ನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ಜಾಗದಲ್ಲಿ ವೈದ್ಯರಿಲ್ಲದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ತಕ್ಷಣವೇ ವೈದ್ಯರನ್ನು ನೇಮಕ ಮಾಡುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ (MD) ನಿರ್ದೇಶನ ನೀಡಿದರು. ಆರೋಗ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಿ, ವೈದ್ಯಕೀಯ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ವಿದ್ಯಾರ್ಥಿ ಬಸ್ ಪಾಸ್ ವಿತರಣೆ ವಿಳಂಬ ತಡೆಯಲು ಕಟ್ಟುನಿಟ್ಟಿನ ಆದೇಶ
ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆಯಲ್ಲಿ ವಿಳಂಬ ಮತ್ತು ಲೋಪದೋಷಗಳು ಉಂಟಾಗುತ್ತಿರುವ ಕುರಿತು ಹಲವು ದೂರುಗಳು ಬಂದಿದ್ದವು. ಈ ಕುರಿತು ಶೀಘ್ರವೇ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸುಲಭ ಹಾಗೂ ತ್ವರಿತವಾಗಿ ಬಸ್ ಪಾಸ್ ದೊರೆಯುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆಜ್ಞಾಪಿಸಿದರು.
ಪ್ರಯಾಣಿಕರೊಂದಿಗೆ ಸಚಿವರ ಸಂವಾದ
ಸ್ಥಳದಲ್ಲಿದ್ದ ಪ್ರಯಾಣಿಕರು ಹಾಗೂ ಪೌರ ಸಿಬ್ಬಂದಿಯೊಂದಿಗೆ ಮುಕ್ತವಾಗಿ ಸಂವಾದ ನಡೆಸಿದ ಸಚಿವರು, ಬಸ್‌ಗಳ ಆಗಮನ-ನಿರ್ಗಮನ ಸಮಯ, ಸ್ವಚ್ಛತೆ, ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆಯನ್ನು ಪರಿಶೀಲಿಸಿದರು. ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮೂಲಸೌಕರ್ಯಗಳಲ್ಲಿ ಯಾವುದೇ ಕೊರತೆಯಾಗದಂತೆ ಮತ್ತು ಸ್ನೇಹಪರ ವಾತಾವರಣ ಕಲ್ಪಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಚಿವರ ಈ ದಿಢೀರ್ ಭೇಟಿ ಮತ್ತು ಸ್ಥಳದಲ್ಲೇ ನಿರ್ಧಾರ ಕೈಗೊಂಡ ಕಾರ್ಯವೈಖರಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಮುದಾಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ