Publish Date: Mon, 31 Aug 2026 (12:17 IST)
Updated Date: Mon, 31 Aug 2026 (12:19 IST)
ಧಾರವಾಡದ ಐತಿಹಾಸಿಕ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಭಾನುವಾರ ತೀವ್ರ ಹೈಡ್ರಾಮಾ ನಡೆದಿದ್ದು, ಬಹುಭಾಷಾ ನಟ ಹಾಗೂ ಸಮಾಜಮುಖಿ ಹೋರಾಟಗಾರ ಪ್ರಕಾಶ್ ರಾಜ್ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇಳೆ ಬಲಪಂಥೀಯ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಮುದಾಯ ಸಂಘಟನೆಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 'ಮನುಷ್ಯತ್ವದೆಡೆಗೆ ಸಮುದಾಯ ಜಾಥಾ' ಹಾಗೂ ಸಂವಾದ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್ ಮುಖ್ಯ ವಕ್ತಾರರಾಗಿ ಭಾಗವಹಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಹಿಂದೂಪರ ಸಂಘಟನೆಗಳು, ಧರ್ಮಸ್ಥಳದ ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕಾಶ್ ರಾಜ್ ಅವರು ಕಾರ್ಯಕ್ರಮದಲ್ಲಿ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುವ ಸಾಧ್ಯತೆಯಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಭಾಂಗಣಕ್ಕೆ ನುಗ್ಗಲು ಯತ್ನಿಸಿದ ಕೆಲವು ಯುವಕರು ಆವರಣದಲ್ಲಿದ್ದ ಪ್ರಕಾಶ್ ರಾಜ್ ಅವರ ಬ್ಯಾನರ್/ಫ್ಲೆಕ್ಸ್ ಅನ್ನು ಹರಿದು, ಫೋಟೋಗೆ ಮಸಿ ಬಳಿದು ಆಕ್ರೋಶ ಹೊರಹಾಕಿದರು. ಸ್ಥಳದಲ್ಲಿ ಪ್ರಕಾಶ್ ರಾಜ್ ವಿರುದ್ಧ ಧಿಕ್ಕಾರದ ಘೋಷಣೆಗಳು ಕೂಗಲ್ಪಟ್ಟರೆ, ಮತ್ತೊಂದೆಡೆ ಕಾರ್ಯಕ್ರಮದ ಆಯೋಜಕರು ಮತ್ತು ಪ್ರಕಾಶ್ ರಾಜ್ ಬೆಂಬಲಿಗರು ಪ್ರತಿಭಟನೆಯನ್ನು ವಿರೋಧಿಸಿ ರಸ್ತೆ ತಡೆ ನಡೆಸಿ ಪರ್ಯಾಯ ಘೋಷಣೆಗಳನ್ನು ಕೂಗಿದರು.
ಸ್ಥಳದಲ್ಲಿ ವಾತಾವರಣ ಉದ್ವಿಗ್ನಗೊಳ್ಳುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಧಾರವಾಡ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಆವರಣದೊಳಗೆ ನುಗ್ಗಲು ಯತ್ನಿಸಿದ ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಹಲವು ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಯಿತು. ಆಯೋಜಕರು ಮುಂಚಿತವಾಗಿಯೇ ಸಭಾಂಗಣದ ಕಾರ್ಯಕ್ರಮಕ್ಕೆ ಸೂಕ್ತ ಪೊಲೀಸ್ ಅನುಮತಿ ಪಡೆದಿದ್ದರು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
'ನನಗೇನೂ ಆಶ್ಚರ್ಯವಾಗಿಲ್ಲ': ಪ್ರಕಾಶ್ ರಾಜ್ ಪ್ರತಿಕ್ರಿಯೆ
ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಪ್ರಕಾಶ್ ರಾಜ್, ಇಂತಹ ವಿರೋಧ ಹಾಗೂ ಪ್ರತಿಭಟನೆಗಳು ತಮಗೆ ಆಶ್ಚರ್ಯ ತಂದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಿಗೆ ಹಾಗೂ ಮಸಿ ಬಳಿಯುವ ಮನಸ್ಥಿತಿ ಉಳ್ಳವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ತಿಳಿಸಿದ ಅವರು, ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಂವಾದವನ್ನು ಮುಂದುವರಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ