ಬೆಂಗಳೂರು: ನಾಳೆ ವರಮಹಾಲಕ್ಷ್ಮಿ ಹಬ್ಬವಿದ್ದು, ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿಗೆ ಭರ್ಜರಿ ಬೇಡಿಕೆಯಿದೆ. ಈ ಹಿನ್ನಲೆಯಲ್ಲಿ ಹಣ್ಣು-ತರಕಾರಿಗಳ ಬೆಲೆ ಗಗನಕ್ಕೇರಿದೆ.
ಪ್ರತೀ ಬಾರಿಯೂ ಹಬ್ಬ ಬಂತೆಂದರೆ ಸಾಕು ಹೂ,ಹಣ್ಣಿನ ಬೆಲೆ ಗನಕ್ಕೇರುತ್ತದೆ. ಈ ಬಾರಿ ಒಮ್ಮೆ ಮಳೆ ಅಭಾವ, ಇನ್ನೊಮ್ಮೆ ಅತಿ ವೃಷ್ಟಿಯಿಂದಾಗಿ ತರಕಾರಿಗಳ ಬೆಲೆ ಈಗಾಗಲೇ ಹೆಚ್ಚಳವಾಗಿದೆ. ಇದೀಗ ಹಬ್ಬದ ಸೀಸನ್ ಕೂಡಾ ಶುರುವಾಗಿದ್ದು ಮತ್ತಷ್ಟು ಬೆಲೆ ಏರಿಕೆಯಾಗಿದೆ. ಹೀಗಾಗಿ ಜನ ಸಾಮಾನ್ಯರು ಹಣ್ಣು-ತರಕಾರಿ ಕೊಳ್ಳಲು ಭಯಪಡುವಂತಾಗಿದೆ.
ಹೂವಿನ ಬೆಲೆ ಹೀಗಿದೆ
ಹಬ್ಬವಾಗಿರುವುದರಿಂದ ಮಾರುಕಟ್ಟೆಯಲ್ಲಿ ನಿನ್ನೆಯಿಂದಲೇ ಜನ ಹೂ ಖರೀದಿಗೆ ಮುಗಿಬಿದ್ದಿದ್ದಾರೆ. ಮಲ್ಲಿಗೆ ಹೂ 120-160, ಚೆಂಡು ಹೂ 150 ರೂ., ತಾವರೆ ಹೂ ಒಂದು ಜೋಡಿಗೆ 100 ರೂ., ಗುಲಾಬಿ 16-200 ರೂ., ಸೇವಂತಿಗೆ 500 ರೂ., ಕನಕಾಂಬರ 500 ರೂ. ಗಡಿ ದಾಟಿದೆ.
ತರಕಾರಿ
ತರಕಾರಿಯೂ ಹೂವಿನ ಬೆಲೆಗೆ ಪೈಪೋಟಿ ನೀಡುವಂತಿದೆ. ಈಗಾಗಲೇ ಇರುವ ಬೆಲೆಗಿಂತ 10-20 ರೂ.ಗಳಷ್ಟು ಎಲ್ಲಾ ತರಕಾರಿ ಬೆಲೆಯೂ ಹೆಚ್ಚಾಗಿದೆ. ಆಲೂಗಡ್ಡೆ 40, ಈರುಳ್ಳಿ 50, ಹಸಿಮೆಣಸಿನಕಾಯಿ 120, ಬದನೆ 80, ನಾಟಿ ಬೀನ್ಸ್ 200, ಕ್ಯಾರೆಟ್ 80, ಹಾಗಲಕಾಯಿ 60, ಬಟಾಣಿ 200, ಬೆಳ್ಳುಳ್ಳಿ 350, ಶುಂಠಿ 200, ಕೊತ್ತಂಬರಿ ಸೊಪ್ಪು ಕಟ್ಟಿಗೆ 40 ರೂ.ಗಳಷ್ಟು ಏರಿಕೆಯಾಗಿದೆ. ಇನ್ನು ಸೇಬು, ದ್ರಾಕ್ಷಿ, ದಾಳಿಂಬೆಯಂತಹ ಹಣ್ಣಿನ ಬೆಲೆಯೂ ಭಾರೀ ಏರಿಕೆಯಾಗಿದೆ.