ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಕೇಂದ್ರದ ಯೋಜನೆ ಬೇರೆಯದೇ ಇತ್ತು. ವಿ. ಸೋಮಣ್ಣ ಪವರ್ ಫುಲ್ ಲೀಡರ್. ಸಿದ್ದರಾಮಯ್ಯ ಅವರನ್ನ ಸೋಲಿಸುವ ಶಕ್ತಿ ಇತ್ತು. ಆದರೆ, ಸಿದ್ದರಾಮಯ್ಯ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಕೇಂದ್ರದ ನಾಯಕರು ಸೋಮಣ್ಣರನ್ನ ಕೈಬಿಡಲ್ಲ. ಕಾಲೆಳೆದವರ ಪ್ರಯತ್ನ ನಡೆದಿರುತ್ತದೆ. ಆದರೆ, ಸೋಮಣ್ಣ ಕಾಳೆಲೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಪಕ್ಷದಲ್ಲಿ ಒಂದು ಕೋಟಿ ಮಂದಿ ಸದಸ್ಯರಿದ್ದಾರೆ. ಯಾರಿಗೆ, ಯಾವ ಸ್ಥಾನ ನೀಡಬೇಕು ಅದನ್ನ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಋಣ ತೀರಿಸಲು ಪಕ್ಷ ತೀರ್ಮಾನಿಸುತ್ತದೆ. ಅಧ್ಯಕ್ಷನಿಂದಲೇ ಪಕ್ಷ ಬೆಳೆಯುತ್ತದೆ ಎಂಬುದು ತಪ್ಪು ಕಲ್ಪನೆ. ನಿತಿನ್ ಗಡ್ಕರಿಯಿಂದಲೇ ಪಕ್ಷ ಬೆಳೆದಿಲ್ಲ. ಈಶ್ವರಪ್ಪ ಅವರಿಂದಲೂ ಪಕ್ಷ ಬೆಳೆದಿಲ್ಲ. ಏಕ ವ್ಯಕ್ತಿಯಿಂದ ಪಕ್ಷ ಬೆಳೆಯುತ್ತದೆ ಎಂಬುದು ಭ್ರಮೆ ಎಂದರು. ರಾಜ್ಯದಲ್ಲಿ ರಾಜ್ಯಾಧ್ಯಕ್ಷ ಹುದ್ದೆ ಖಾಲಿ ಇಲ್ಲ. ರಾಜ್ಯಾಧ್ಯಕ್ಷ ಯಾರಿಗೆ, ಯಾವಾಗ ಮಾಡಬೇಕು ಎಂಬುದನ್ನ ಪಕ್ಷ ತೀರ್ಮಾನಿಸುತ್ತದೆ ಎಂದು ಅವರು ತಿಳಿಸಿದರು.