Publish Date: Thu, 26 Apr 2018 (17:44 IST)
Updated Date: Thu, 26 Apr 2018 (17:47 IST)
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಕರುನಾಡ ಯಾತ್ರೆ ಭಾಗವಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗಣಿನಗರಿ ಬಳ್ಳಾರಿಗೆ ನಾಳೆ ಭೇಟಿ ನೀಡಲಿದ್ದಾರೆ.
ಈ ಕುರಿತು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಅಮಿತ್ ಶಾ ಅವರು ಬೆಳಗ್ಗೆ 10. 30 ಕ್ಕೆ ನಗರದ ಅಧಿದೇವತೆ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ನಂತರ ಕನಕದುರ್ಗಮ್ಮ ದೇವಸ್ಥಾನದಿಂದ ಬೆಂಗಳೂರು ರಸ್ತೆವರೆಗೆ ನಡೆಯುವ ರೋಡ್ ಶೋನಲ್ಲಿ ಭಾಗಿಯಾಗಿ ಬಿಜೆಪಿ ಪರ ಮತ ಯಾಚನೆ ನಡೆಸಲಿದ್ದಾರೆ. ಈ ಸಂದರ್ಭ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಜಿಲ್ಲಾ ಬಿಜೆಪಿ ಮುಖಂಡರು, ನಗರ ಕ್ಷೇತ್ರದ ಅಭ್ಯರ್ಥಿ ಜಿ. ಸೋಮಶೇಖರ ರೆಡ್ಡಿ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಸಣ್ಣಫಕೀರಪ್ಪ ಸಾಥ್ ನೀಡಲಿದ್ದಾರೆ.
ಆ ನಂತರ ಅಮಿತ್ ಶಾ ಮತ್ತು ಬಿಎಸ್ವೈ ಅವರು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದು ಜಿಲ್ಲೆಯ ಕುಕನೂರಿನಲ್ಲಿ ಮಧ್ಯಾಹ್ನ 4 ಗಂಟೆಗೆ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.