ಕೊಪ್ಪಳ: ತುಂಗಭದ್ರ ಜಲಾಶಯದ 19 ನೇ ಕ್ರಸ್ಟ್ ಗೇಟ್ ನ ಚೈನ್ ಕಟ್ ಆಗಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಕರ್ನಾಟಕದ ಬಯಲು ಸೀಮೆ ಮಾತ್ರವಲ್ಲದೆ, ಪಕ್ಕದ ತೆಲಂಗಾಣದ ಜನರಲ್ಲೂ ಆತಂಕದ ಕಾರ್ಮೋಡ ಕವಿದಿದೆ. 
									
			
			 
 			
 
 			
					
			        							
								
																	ತುಂಬಿರುವ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು ಸುತ್ತಮುತ್ತಲ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್, ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ತಜ್ಞರ ಜೊತೆ ಸಭೆ ನಡೆಸಿ ಶೀಘ್ರದಲ್ಲೇ ಗೇಟ್ ಸರಿಪಡಿಸಲು ಸೂಚಿಸಿದ್ದಾರೆ. ಆದರೆ ಗೇಟ್ ಸರಿಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹೀಗಾಗಿ ದುರಸ್ತಿಯಾಗಬೇಕಾದರೆ ಇನ್ನೂ ಒಂದು ವಾರವಾಗಬಹುದು ಎನ್ನಲಾಗಿದೆ.
									
										
								
																	ಹೀಗಾಗಿ ಕೇವಲ ಕರ್ನಾಟಕ ಮಾತ್ರವಲ್ಲ, ಪಕ್ಕದ ತೆಲಂಗಾಣ ರಾಜ್ಯದ ಜನರಿಗೂ ಆತಂಕ ಎದುರಾಗಿದೆ. ಡ್ಯಾಂನಲ್ಲಿ 100 ಟಿಎಂಸಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಆದರೆ ಭಾರೀ ಮಳೆಯಿಂದಾಗಿ ಅಪಾರ ನೀರು ಸಂಗ್ರಹವಾಗಿದೆ. ತೆಲಂಗಾಣದ ರೈತ ಸಮೂಹದಲ್ಲೂ ಪ್ರವಾಹದ ಭೀತಿ ಎದುರಾಗಿದೆ.
									
											
							                     
							
							
			        							
								
																	ಇನ್ನು, ಈ ವಿಚಾರವಾಗಿ ರಾಜಕೀಯ ನಾಯಕರು ಕೆಸರೆರಚಾಟ ಮಾಡುತ್ತಿದ್ದಾರೆ. ಇಂದು ಬಿಜೆಪಿ ನಾಯಕರ ನಿಯೋಗ ತುಂಗ ಭದ್ರ ಜಲಾಶಯದ ಸ್ಥಿತಿಗತಿ ಅರಿಯಲು ಭೇಟಿ ನೀಡಲಿದೆ. ನಾಳೆ ಸಿಎಂ ಸಿದ್ದರಾಮಯ್ಯ ಕೂಡಾ ಜಲಾಶಯಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.