Select Your Language

Notifications

webdunia
webdunia
webdunia
webdunia

ಧರ್ಮವನ್ನು ಪುನರುದ್ಧಾರ ಮಾಡಲು ಅವತಾರ ತಾಳಿದ ಶ್ರೀ ಕೃಷ್ಣನ ಕಥೆಯಿದು..!

ಧರ್ಮವನ್ನು ಪುನರುದ್ಧಾರ ಮಾಡಲು ಅವತಾರ ತಾಳಿದ ಶ್ರೀ ಕೃಷ್ಣನ ಕಥೆಯಿದು..!
ಬೆಂಗಳೂರು , ಸೋಮವಾರ, 30 ಆಗಸ್ಟ್ 2021 (08:58 IST)
Krishna Janmashtami 2021: ಶ್ರೀಕೃಷ್ಣನಿಗೆ ಪ್ರಿಯವಾದಂತಹ ಬೆಣ್ಣೆ, ತುಳಸಿಯನ್ನು ಸಮರ್ಪಿಸಿ ಆತನಿಗೆ ಪ್ರಿಯವಾದಂತಹ ಭಕ್ತಿ ಶ್ರದ್ಧೆಗಳಿಂದ ವಿಶೇಷವಾಗಿ ಅವನನ್ನು ಆರಾಧಿಸಿ ಪುಣ್ಯವನ್ನು ಸಂಪಾದಿಸಿಕೊಳ್ಳೋಣ.

ಭಾರತೀಯ ಪರಂಪರೆಯಲ್ಲಿ ರಾಮಾಯಣ ಮಹಾಭಾರತಗಳು ಅತ್ಯಂತ ಮಹತ್ತರವಾದ ಪಾತ್ರವನ್ನು ಹೊಂದಿವೆ. ವೇದ ಶಾಸ್ತ್ರಗಳಲ್ಲಿ ಹೇಳಿರುವ ಎಲ್ಲಾ ಮೌಲ್ಯಗಳನ್ನು ಅತ್ಯಂತ ಸರಳವಾಗಿ ಎಲ್ಲಾ ವರ್ಗದ ಜನರಿಗೆ ತಲುಪಿಸುವ ಮಹೋನ್ನತೆಯು ಈ ಗ್ರಂಥಗಳಿಗಿದೆ. ಅತಂಹ ಗ್ರಂಥಗಳಲ್ಲಿ ಪ್ರಮುಖವಾದ ಮಹಾಭಾರತದಲ್ಲಿ ಶ್ರೀ ಕೃಷ್ಣನಿಗೆ ಪ್ರಮುಖ ಪಾತ್ರವಿದೆ. ಪಾಂಡವರ ತಾಯಿ ಕುಂತಿ. ಈಕೆ ಶ್ರೀಕೃಷ್ಣನ ತಂದೆಯಾದ ವಸುದೇವನ ತಂಗಿ. ಹೀಗಾಗಿ ಪಾಂಡವರಿಗೆ ಶ್ರೀಕೃಷ್ಣ ಸಂಬಂಧಿಯೂ ಹೌದು.
ಮಹಾಭಾರತದ ಕಥೆಯಲ್ಲಿ ಶ್ರೀಕೃಷ್ಣನ ಪ್ರವೇಶವಾಗುವುದು ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ. ಶ್ರೀಕೃಷ್ಣನು ಪಾಂಡವರ ಗುರುತನ್ನು  ಬಲರಾಮನಿಗೆ ತೋರಿಸುತ್ತಾನೆ. ನಂತರ ಅವನು ದ್ರೌಪದಿ ಮತ್ತು ಪಾಂಡವರ ವಿವಾಹದಲ್ಲಿ ಭಾಗವಹಿಸುತ್ತಾನೆ. ಮೋಸದ ಜೂಜಿನಾಟದಲ್ಲಿ ಪಾಂಡವರು ಸೋತಾಗ ದುಷ್ಟ ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸುತ್ತಾರೆ. ಆಗ ದ್ರೌಪದಿಗೆ ಅಕ್ಷಯವಸ್ತ್ರವನ್ನು ಕೊಡುವ ಮೂಲಕ ಅವಳ ಮಾನರಕ್ಷಣೆ ಮಾಡುತ್ತಾನೆ. ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ. ಯುದ್ಧರಂಗದಲ್ಲಿ ತನ್ನ ಗುರು-ಬಂಧು-ಮಿತ್ರರೊಂದಿಗೆ ಯುದ್ಧ ಮಾಡಲು ನಿರಾಕರಿಸುವ ಅರ್ಜುನನಿಗೆ ಶ್ರೀಕೃಷ್ಣ ಉಪದೇಶವನ್ನು ನೀಡುತ್ತಾನೆ. ಕೃಷ್ಣ ಏಕಾಂಗಿಯಾಗಿ, ಆಯುಧಗಳು ಇಲ್ಲದೆಯೇ ಕೇವಲ ಸಾರಥಿಯಾಗಿ ಭಾಗಿಯಾಗುತ್ತಾನೆ.
ಧರ್ಮಾಧರ್ಮಗಳ ಕುರುಕ್ಷೇತ್ರ ಯುದ್ಧದಲ್ಲಿ ಧರ್ಮದ ಪರವಾಗಿದ್ದ ಪಾಂಡವರಿಗೆ ಜಯ ತಂದುಕೊಡುತ್ತಾನೆ. ರಾಮಾಯಣದಲ್ಲಿ ಶ್ರೀರಾಮನು ವಾಲಿಯನ್ನು ಕೊಂದಾಗ, ವಾಲಿಗೆ ಮುಂದಿನ ಅವತಾರದಲ್ಲಿ ನೀನು ನನ್ನನ್ನು ಕೊಲ್ಲುವೆಯಂತೆ ಎಂದು ವರವನ್ನು ನೀಡಿರುತ್ತಾನೆ. ಅದರಂತೆಯೇ ಜರಾ ಎಂಬ ಬೇಡನಾಗಿ ಜನ್ಮ ತಾಳಿದ ವಾಲಿಯು, ಕೃಷ್ಣನ ಕಾಲಿನ ಹೆಬ್ಬೆರಳನ್ನು ಜಿಂಕೆ ಎಂದು ಭಾವಿಸಿ ಬಾಣ ಹೊಡೆಯುತ್ತಾನೆ. ಆ ಬಾಣದಿಂದ ಜಗನ್ನಿಯಾಮಕ ಶ್ರೀ ಕೃಷ್ಣನ  ಅವತಾರವು ಸಮಾಪ್ತಿಯಾಗುತ್ತದೆ. ಈ ರೀತಿಯಾಗಿ ಭಗವಂತನಾದ ಶ್ರೀ ಕೃಷ್ಣನ ಕಥೆಯನ್ನು ನಾವು ಗಮನಿಸಬಹುದು.
ಧರ್ಮವನ್ನು ಬೋಧಿಸಲು ಅಥವಾ ಧರ್ಮಮಾರ್ಗದಲ್ಲಿರುವವರನ್ನು ರಕ್ಷಿಸಲು ನಾನು ಅವತಾರವನ್ನು ತಾಳುತ್ತೇನೆ ಎಂದು ಆ ಪರಮಾತ್ಮ ಶ್ರೀಕೃಷ್ಣನ ಅವತಾರದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ ಮುಂತಾದ ಅವತಾರಗಳ ಮುಖಾಂತರವಾಗಿ ಆಯಾ ಸಂದರ್ಭದಲ್ಲಿ ಧರ್ಮವನ್ನು ಅಪುನರುದ್ಧಾರ ಮಾಡಲು  ಶ್ರೀಕೃಷ್ಣ ನಾನಾ ಅವತಾರಗಳನ್ನು  ತಾಳಿದ್ದಾನೆ.
ಅಂತಹ ಶ್ರೀಕೃಷ್ಣನ ಜನ್ಮದಿನವೇ ಶ್ರಾವಣ ಮಾಸದ ಕೃಷ್ಣ ಪಕ್ಷದ ರೋಹಿಣಿ ನಕ್ಷತ್ರಯುಕ್ತವಾದ ಅಷ್ಟಮೀ. ಇದು ದೇವಕೀ ಯಶೋಧೆಯರ ಮುದ್ದಿನ ಮಗುವಾಗಿ ಭಗವಂತ ಭೂಮಿಯಲ್ಲಿ ಅವತರಿಸಿದ ಸುದಿನ.
ಕಂಸನ ಕಾರಾಗೃಹದಲ್ಲಿ  ಭಗವಂತ ಜನಿಸುತ್ತಾನೆ ಎನ್ನುವ ಅಂಶದಲ್ಲಿ ನಾವು ಒಂದು ಪ್ರಮುಖವಾದ ವಿಷಯವನ್ನು ಗ್ರಹಿಸಬಹುದು. ದೇವನೇ ಆಗಿರಲಿ ಅಥವಾ ಮನುಷ್ಯನೇ ಆಗಿರಲಿ,  ಭೂಮಿಯಲ್ಲಿ ಜನಿಸಿದರೆ  ಅದು ಒಂದು ರೀತಿಯ ಬಂಧನವೇ ಆಗಿರುತ್ತದೆ ಎನ್ನುವುದನ್ನು ಸಾಂಕೇತಿಕವಾಗಿ ನಮಗೆ ತಿಳಿಸುವಂತಹ ಪ್ರಸಂಗವಾಗಿದೆ. ಈ ರೀತಿಯಾಗಿ ಶ್ರೀಕೃಷ್ಣನ ಜನ್ಮದಿಂದ ಹಿಡಿದು ಆತನ ಜೀವನದ ಪ್ರತಿಯೊಂದು ಸನ್ನಿವೇಶಗಳು ಕೂಡ ನಮಗೆ ಧರ್ಮಮಾರ್ಗವನ್ನು ಉಪದೇಶಿಸುತ್ತವೆ. ಯಾವ ರೀತಿಯಾಗಿ ಧರ್ಮವನ್ನು ಪಾಲನೆ ಮಾಡಬೇಕು..? ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವ ರೀತಿಯಾಗಿ ನಮ್ಮ ಯೋಚನೆಗಳಿರಬೇಕು..? ಯೋಚನೆಗೆ ಸರಿಯಾಗಿ ಯಾವ ರೀತಿಯಲ್ಲಿ ನಾವು ನಮ್ಮ ಕೆಲಸಗಳನ್ನು ಮಾಡಬೇಕು..? ಎನ್ನುವುದನ್ನು ಶ್ರೀಕೃಷ್ಣ ಪರಮಾತ್ಮನ ಜೀವನದ ಸನ್ನಿವೇಶಗಳಿಂದ ನಾವು ತಿಳಿದುಕೊಳ್ಳಬಹುದು.
ಅರ್ಜುನನನ್ನು ಕೇವಲ ನಿಮಿತ್ತವಾಗಿಸಿಕೊಂಡು ಶ್ರೀಕೃಷ್ಣಪರಮಾತ್ಮನು ನಮಗೆ ಭಗವದ್ಗೀತೆ ಎಂಬಂತಹ ಮಹೋನ್ನತವಾದಂತಹ ಗ್ರಂಥವನ್ನು ಉಪದೇಶಿಸಿದ್ದಾನೆ. ಮೊದಲನೆಯ ಅಧ್ಯಾಯದಲ್ಲಿ ಅರ್ಜುನನು ಯಾವ ರೀತಿಯಾಗಿ ದುಃಖಿಸುತ್ತಾನೆ ಎನ್ನುವುದು ಮತ್ತು ಉಳಿದ ಭಾಗಗಳಲ್ಲಿ ಅದಕ್ಕೆ ಭಗವಂತ ನೀಡಿರುವಂತಹ ಉತ್ತರಗಳ ಪ್ರಶ್ನೋತ್ತರ ಮಾಲಿಕೆಯು ಇದರಲ್ಲಿದೆ. ಈ ಪ್ರಶ್ನೋತ್ತರ ಮಾಲಿಕೆಯಲ್ಲಿ ಭಗವಂತ ಪ್ರತಿಯೊಂದು ಹಂತದಲ್ಲಿಯೂ ಮನುಷ್ಯ ಯಾವ ರೀತಿಯಾಗಿ ಬದುಕಬೇಕು ಶ್ರದ್ಧೆ,ಭಕ್ತಿ, ಕರ್ಮ, ಜ್ಞಾನ ಮುಂತಾದ ವಿಚಾರಗಳು ಯಾವ ರೀತಿಯಾಗಿರುತ್ತವೆ ಎನ್ನುವುದನ್ನು ತಿಳಿಸಿದ್ದಾನೆ.
ಈ ರೀತಿಯಾದ ಪರಮಾದ್ಭುತವಾದ  ಚರಿತ್ರೆಯನ್ನು ಹೊಂದಿರುವಂತಹ ಆ ಭಗವಂತನನ್ನು ನಾವು ಎಷ್ಟು ನೆನೆದರೂ ಸಾಲದು. ನಾವು ಅನನ್ಯ ಭಕ್ತಿ ಶ್ರದ್ಧೆಯಿಂದ ಆತನನ್ನು  ಪ್ರಾರ್ಥಿಸಿದರೆ ಆರಾಧಿಸಿದರೆ ನಮಗೆ ಎಲ್ಲಾ ರೀತಿಯ ಶ್ರೇಯಸ್ಸುಗಳು ಉಂಟಾಗುತ್ತವೆ. ಭಕ್ತಿಮಾನ್ ಯಃ ಸ ಮೇ ಪ್ರಿಯಃ ಎನ್ನುವಂತಹ ಮಾತಿನಿಂದ ಗೀತೆಯಲ್ಲಿ ಆತನೇ ಇದನ್ನು ಹೇಳಿದ್ದಾನೆ.  ಪ್ರತಿನಿತ್ಯವೂ ಕೂಡ ಆರಾಧಿಸಲ್ಪಡಬೇಕಾದಂತಹ ಆ ಭಗವಂತನನ್ನು ಆತನ ಜನ್ಮದಿನದ ಶುಭ ಮುಹೂರ್ತದಲ್ಲಿ ಈ ಕೃಷ್ಣ ಜನ್ಮಾಷ್ಟಮಿಯಂದು ನಾವು ಅನನ್ಯ ಶ್ರದ್ಧಾ ಭಕ್ತಿಗಳಿಂದ ಆರಾಧಿಸೋಣ. ಇದು ಅತ್ಯಂತ ಶ್ರೇಯಃಪ್ರದವಾದದ್ದು. ಶ್ರೀಕೃಷ್ಣ ಜನ್ಮಾಷ್ಟಮಿವ್ರತ ಎನ್ನುವಂತಹ ವ್ರತವನ್ನು ಆಚರಿಸಿ ಮುಖ್ಯವಾಗಿ ಅದರಲ್ಲಿ ಶ್ರೀಕೃಷ್ಣನನ್ನು ಆರಾಧಿಸಿ ಕೊನೆಯಲ್ಲಿ ಚಂದ್ರನಿಗೆ  ಮತ್ತು ಶ್ರೀ ಕೃಷ್ಣ ಪರಮಾತ್ಮನಿಗೆ ವಿಶೇಷವಾದಂತಹ ಅರ್ಘ್ಯವನ್ನು ಕೊಡುವ ಪದ್ಧತಿಯು ನಮ್ಮಲ್ಲಿದೆ.
ಜಾತಃ ಕಂಸವಧಾರ್ಥಾಯ ಭೂಭಾರೋತ್ತರಣಾಯ ಚ ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ|| ಇತ್ಯಾದಿ ಶ್ಲೋಕಗಳಿಂದ  ಶ್ರೀಕೃಷ್ಣನಿಗೆ ಅರ್ಘ್ಯವನ್ನು ಕೊಡಬೇಕು. ಶ್ರೀಕೃಷ್ಣನಿಗೆ ಪ್ರಿಯವಾದಂತಹ ಬೆಣ್ಣೆ, ತುಳಸಿಯನ್ನು ಸಮರ್ಪಿಸಿ ಆತನಿಗೆ ಪ್ರಿಯವಾದಂತಹ ಭಕ್ತಿ ಶ್ರದ್ಧೆಗಳಿಂದ ವಿಶೇಷವಾಗಿ ಅವನನ್ನು ಆರಾಧಿಸಿ ಪುಣ್ಯವನ್ನು ಸಂಪಾದಿಸಿಕೊಳ್ಳೋಣ.


Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಕಪ್ಪು ಕೋಟು ಧರಿಸುವುದಕ್ಕೆ ವಿನಾಯಿತಿ ನೀಡಿ ಎಂದು ಮನವಿ ಸಲ್ಲಿಸಿದ ವಕೀಲ