ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ನಿನ್ನೆ ಲೋಕಾರ್ಪಣೆಯಾದ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ರೈಲುಗಳ ಟ್ರಿಪ್‌ನಲ್ಲಿ ಭಾರಿ ಅಂತರ ಇರುವುದರಿಂದ ನಿಲ್ದಾಣ ಹಾಗೂ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಕಂಡುಬಂದಿದೆ.
ಈ ಕುರಿತು ಅನೇಕ ಪ್ರಯಾಣಿಕರು ತಾವು ಅನುಭವಿಸಿದ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳಾದ ಪೇಸ್‌ಬುಕ್, ಎಕ್ಸ್‌ನಲ್ಲಿ ತೋಡಿಕೊಂಡಿದ್ದಾರೆ.
ಮೆಟ್ರೋ ಹಳದಿ ಮಾರ್ಗದಿಂದಾಗಿ 19 ಕಿ.ಮೀ ದೂರವನ್ನು ಕೇವಲ 33 ನಿಮಿಷದಲ್ಲಿ ತಲುಪುತ್ತಿದ್ದೇವೆ. ವ್ಯವಸ್ಥೆ ಅದ್ಭುತವಾಗಿದೆ. ಆದರೆ, ಎರಡೂ ಕಡೆ ಭಾರಿ ದಟ್ಟಣೆ ಉಂಟಾಗುತ್ತಿದೆ ಎಂದು ಪ್ರಯಾಣಿಕರೊಬ್ಬರು ಅಲವತ್ತುಕೊಂಡಿದ್ದಾರೆ.
ಮೊದಲ ದಿನ ಪ್ರಯಾಣ ಅನುಭವ ಕೆಟ್ಟದಾಗಿತ್ತು. ಇದಕ್ಕೆ ಟ್ರಿಪ್ ಅಂತರವೇ ಕಾರಣ. ಆದಷ್ಟು ಬೇಗ ಬಿಎಂಆರ್‌ಸಿಎಲ್ ಹೆಚ್ಚಿನ ರೈಲುಗಳನ್ನು ಓಡಿಸಬೇಕು ಎಂದು ಮನವಿ ಮಾಡಿದ್ದಾರೆ. ಇದೇ ರೀತಿ ಹಲವರು ಹಳದಿ ಮಾರ್ಗದಲ್ಲಿ ದಟ್ಟಣೆಯ ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ಸಂಬಂಧ ಪ್ರತಿಕ್ರಿಯಿಸಿ, ಹೆಚ್ಚು ರೈಲು ಬೋಗಿಗಳು ಪೂರೈಕೆಯಾಗುತ್ತಿದ್ದಂತೆ, ರೈಲುಗಳ ಟ್ರಿಪ್ ಹೆಚ್ಚಿಸಲಾಗುವುದು ಎಂದರು.
ಪ್ರತಿ ಭಾನುವಾರ ರೈಲು ಸಂಚಾರ ಬೆಳಿಗ್ಗೆ 6.30ರ ಬದಲಾಗಿ 7ಕ್ಕೆ ಪ್ರಾರಂಭವಾಗಲಿದೆ. ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣದ ದರ ₹60 ಆಗಿದೆ. ಟೋಕನ್, ಎನ್‌ಸಿಎಂಸಿ ಕಾರ್ಡ್, ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್ ಲಭ್ಯವಿವೆ