ಬೆಂಗಳೂರು: ಬೆಂಗಳೂರಿನ ಜನರ ಕೌಶಲ್ಯ ಶ್ಲಾಘನೀಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಇಂದು 15,611 ಕೋಟಿ ರೂ ವೆಚ್ಚದ ಬೆಂಗಳೂರು ಮೆಟ್ರೋ ಹಂತ-3 ರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಬೆಂಗಳೂರು ಯೆಲ್ಲೋ ಲೈನಿನ ಉದ್ಘಾಟನೆ ಮಾಡಲಾಗಿದೆ. ಇಂದು 3 ಹೊಸ ವಂದೇ ಭಾರತ್ ರೈಲು ಸೇವೆಯನ್ನೂ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಆಪರೇಷನ್ ಸಿಂದೂರದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಈ ಕಾರ್ಯಾಚರಣೆಯಲ್ಲಿ ಸೇನೆಯ ಸಫಲತೆ ಶ್ಲಾಘನೀಯ ಎಂದು ತಿಳಿಸಿದರು. ಉಗ್ರರ ವಿರುದ್ಧ ಕೈಗೊಂಡ ಕ್ರಮಗಳು ನವ ಭಾರತದ ಸಾಮಥ್ರ್ಯವನ್ನು ಅನಾವರಣಗೊಳಿಸಿವೆ ಎಂದು ತಿಳಿಸಿದರು.
ಮೇಕ್ ಇನ್ ಇಂಡಿಯದ ತಾಕತ್ತಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಯುವಜನರ ಕೊಡಗೆ ದೊಡ್ಡದು ಎಂದ ಅವರು, ಬೆಂಗಳೂರು ಜಗತ್ತಿನೊಂದಿಗೆ ಸ್ಪರ್ಧೆ ಮಾಡುವಂತಿರಬೇಕು. ಆರ್.ವಿ,ರಸ್ತೆಯಿಂದ ಬೊಮ್ಮಸಂದ್ರದವರೆಗೆ ಯೆಲ್ಲೋ ಲೈನ್ ಆರಂಭವಾಗಿದೆ. ಇದರಿಂದ ಲಕ್ಷಾಂತರ ಜನರಿಗೆ ನೆರವಾಗಲಿದೆ ಎಂದು ಹೇಳಿದರು. 3ನೇ ಹಂತ ಪೂರ್ಣಗೊಂಡಾಗ 25 ಲಕ್ಷ ಜನರು ಮೆಟ್ರೊದಲ್ಲಿ ಪ್ರಯಾಣಿಸಲಿದ್ದಾರೆ ಎಂದು ವಿವರ ನೀಡಿದರು.
ಭಾರತವು ಅತ್ಯಂತ ವೇಗವಾಗಿ ಬೆಳೆಯುವ ದೇಶವಾಗಿ ಹೊರಹೊಮ್ಮಿದೆ. ಶೀಘ್ರವೇ ಅದು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2014ರಲ್ಲಿ 5 ನಗರಗಳಲ್ಲಿ ಮಾತ್ರ ಮೆಟ್ರೋ ಇತ್ತು. ಈಗ ಅದು 24 ನಗರಗಳ ವ್ಯಾಪ್ತಿ ಹೊಂದಿದೆ. ಕಳೆದ 11 ವರ್ಷಗಳಲ್ಲಿ ರೈಲ್ವೆ ಲೈನ್ ವಿದ್ಯುದೀಕರಣದಲ್ಲೂ ಗರಿಷ್ಠ ಸಾಧನೆ ಮಾಡಿದ್ದೇವೆ ಎಂದರು.
ವಿಮಾನನಿಲ್ದಾಣಗಳ ಸಂಖ್ಯೆಯೂ ಬಹುತೇಕ ದ್ವಿಗುಣವಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲೂ ಕ್ರಾಂತಿಕಾರಿ ಬದಲಾವಣೆ ಆಗಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಳ, ವೈದ್ಯ ಶಿಕ್ಷಣದ ಸೀಟುಗಳ ಸಂಖ್ಯೆ ಹೆಚ್ಚಳದ ಕುರಿತು ಅವರು ಮಾಹಿತಿ ನೀಡಿದರು. ದೇಶದ ಅಭಿವೃದ್ಧಿ ಜೊತೆಜೊತೆಗೇ ಬಡವರ ಜೀವನದಲ್ಲೂ ಸುಧಾರಣೆ ಕಂಡು ಬಂದಿದೆ. ಕಳೆದ 11 ವರ್ಷಗಳಲ್ಲಿ 12 ಕೋಟಿ ಶೌಚಾಲಯ ನಿರ್ಮಿಸಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ರಫ್ತು ಪ್ರಮಾಣವು ಬಹುತೇಕ ದ್ವಿಗುಣವಾಗಿದೆ. ಮೊಬೈಲ್ ಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ನಾವು ಅತಿ ದೊಡ್ಡ ಮೊಬೈಲ್ ರಫ್ತುದಾರನಾಗಿ ಹೊರಹೊಮ್ಮಿದ್ದೇವೆ. ಇದರಲ್ಲಿ ಬೆಂಗಳೂರಿನ ಕೊಡುಗೆಯೂ ದೊಡ್ಡದು ಎಂದರು. ವಿಕಸಿತ ಭಾರತದ ಕನಸು ಡಿಜಿಟಲ್ ಇಂಡಿಯದ ಮೂಲಕ ನನಸಾಗಬೇಕಿದೆ ಎಂದು ವಿಶ್ಲೇಷಿಸಿದರು. ದೇಶದಲ್ಲಿ 2,200ಕ್ಕೂ ಹೆಚ್ಚು ಸೇವೆಗಳು ಮೊಬೈಲ್‍ನಲ್ಲಿ ಲಭ್ಯವಿವೆ ಎಂದರು.
ಕನ್ನಡದಲ್ಲಿ ಮಾತನಾಡಿ, ಬೆಂಗಳೂರು ನಗರದ ಜನರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ ಅವರು ಭಾಷಣ ಆರಂಭಿಸಿದರು. ಇಲ್ಲಿನ ಸಂಸ್ಕøತಿ, ಪ್ರೀತಿ, ಕನ್ನಡ ಭಾಷೆಯ ಸೊಗಸನ್ನು ಮೆಚ್ಚಿಕೊಂಡಿರುವುದಾಗಿ ತಿಳಿಸಿದರು. ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ಪರಿಣಾಮವಾಗಿ ಪ್ರಗತಿ ಮತ್ತು ಪರಂಪರೆಗಳನ್ನು ಒಳಗೊಂಡ ನಗರವಾಗಿ ಬೆಂಗಳೂರು ಬೆಳೆದಿದೆ ಎಂದು ಮೆಚ್ಚುಗೆ ಸೂಚಿಸಿದರು.
ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಮಾತನಾಡಿ, ರೈಲ್ವೆ ಇಲಾಖೆಗೆ 7500 ಕೋಟಿ ಬಜೆಟ್ ಕೊಡುಗೆ ನೀಡಿದ ನರೇಂದ್ರ ಮೋದಿಜೀ ಅವರನ್ನು ಅಭಿನಂದಿಸಿದರು. ಇದೇವೇಳೆ ಜನತೆ ಕೂಡ ಎದ್ದುನಿಂತು ಮೋದಿಜೀ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಮಾತನಾಡಿ, ಬೆಂಗಳೂರು ಜಗತ್ತಿನ ಗಮನ ಸೆಳೆಯುವ ನಗರ. ಇಲ್ಲಿನ ಸಂಚಾರ ಸಮಸ್ಯೆ ಬಗೆಹರಿಸಲು ಆದ್ಯತೆ ಕೊಡಲಾಗುತ್ತಿದೆ ಎಂದು ವಿವರಿಸಿದರು. ಕಳೆದ 11 ವರ್ಷಗಳಲ್ಲಿ ಕೇಂದ್ರ ಸರಕಾರವು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದೆ ಎಂದು ತಿಳಿಸಿದರು. ವಿಕಸಿತ ಭಾರತಕ್ಕೆ ಸಜ್ಜಾದ ದೇಶದ ಕುರಿತಂತೆ ಅವರು ವಿವರ ನೀಡಿದರು.
ಸ್ವಾಗತಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮೋದಿಯವರು ಕಾಯಕಯೋಗಿ ಎಂದು ಬಣ್ಣಿಸಿದರು.
ಮೆಟ್ರೊಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾನ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ, ಕು.ಶೋಭಾ ಕರಂದ್ಲಾಜೆ, ಮನೋಹರ್ ಲಾಲ್ ಖಟ್ಟರ್, ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ರಾಜ್ಯದ ಸಚಿವರಾದ ಬೈರತಿ ಸುರೇಶ್, ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಡಾ.ಸಿ.ಎನ್.ಮಂಜುನಾಥ್, ಪ್ರಮುಖರು ಉಪಸ್ಥಿತರಿದ್ದರು.
ಯೆಲ್ಲೋ ಮೆಟ್ರೋ ಲೈನಿಗೆ ಚಾಲನೆ
ಇಂದು ಯೆಲ್ಲೋ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ಕೊಟ್ಟ ಪ್ರಧಾನಿಯವರು ಬಳಿಕ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಅಲ್ಲದೇ, ಜನರು ಮತ್ತು ಮೆಟ್ರೋ ಸಿಬ್ಬಂದಿಯ ಜೊತೆ ಮಾತುಕತೆ ನಡೆಸಿದರು. ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶ ಲಭಿಸಿದ ವಿದ್ಯಾರ್ಥಿವೃಂದದ ಜೊತೆ ಕೂಡ ಅವರು ಸಂವಾದ ಮಾಡಿದರು. ಪ್ರಧಾನಿಯವರು ಸಾಗುವ ಮಾರ್ಗದಲ್ಲಿ ಪುಷ್ಪವೃಷ್ಟಿ ಮಾಡಲಾಯಿತು. ಮಳೆ ಇದ್ದರೂ ಜನರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
3 ವಂದೇ ಭಾರತ್ ರೈಲು ಲೋಕಾರ್ಪಣೆ
ಮುಂಜಾನೆ ದೆಹಲಿಯಿಂದ ಬೆಂಗಳೂರಿಗೆ ಇಂದು ಬಂದಿಳಿದ ಗೌರವಾನ್ವಿತ ಪ್ರಧಾನಿ ಮೋದಿ ಜೀ ಅವರು ಕೆಎಸ್‍ಆರ್ ರೈಲ್ವೇ ನಿಲ್ದಾಣಕ್ಕೆ ತೆರಳಿದರು. ಅಲ್ಲಿ ಅವರು ಬೆಂಗಳೂರು - ಬೆಳಗಾವಿ ಒಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಅಮೃತ್‍ಸರ್ - ಶ್ರೀ ಮಾತಾ ವೈಷ್ಣೋದೇವಿ ಮತ್ತು ನಾಗಪುರ್-ಪುಣೆ ವಂದೇ ಭಾರತ್ ರೈಲುಗಳಿಗೆ ಅವರು ಆನ್‍ಲೈನ್ ಮೂಲಕ ಚಾಲನೆ ನೀಡಿದರು