ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಸೂಕ್ತ ಅನುದಾನ ದೊರೆಯುತ್ತಿಲ್ಲ. ಬೆಂಗಳೂರನ್ನು ಕಡೆಗಣಿಸಲಾಗುತ್ತಿದೆ. ಕರ್ನಾಟಕಕ್ಕೆ ಮತ್ತು ಬೆಂಗಳೂರಿಗೆ ಬಿಜೆಪಿ ಯಾವೊಬ್ಬ ಸಂಸದ ₹ 10 ಅನುದಾನ ಕೊಟ್ಟಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಇಂದು ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆಯ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸಂಸದರಿಗೆ ನಾಚಿಕೆಯಾಬೇಕು. ಒಬ್ಬನೇ ಒಬ್ಬ ಬಿಜೆಪಿ ಎಂಪಿ ₹ 10 ರೂಪಾಯಿ ಅನುದಾನ ಕೊಡಿಸಿಲ್ಲ. ಬಿಜೆಪಿ ಅವರ ಸಾಧನೆ ಏನಿಲ್ಲ ಎಂದು ಲೇವಡಿ ಮಾಡಿದರು.
ಹಳದಿ ಮಾರ್ಗಕ್ಕೆ ರಾಜ್ಯದ್ದೇ ಪಾಲು ಹೆಚ್ಚು. ಶೇ 80 ಅನುದಾನವನ್ನು ನಾವು ಕೊಟ್ಟಿದ್ದೇವೆ. ಬಿಜೆಪಿಯವರು ನಾವೇ ಮೆಟ್ರೋ ಮಾಡಿದ್ದಾರೆ ಎಂದು ಶೋ ಮಾಡುತ್ತಿದ್ದಾರೆ. ನಮ್ಮ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಶೇ 20 ಅನುದಾನ ನೀಡಿದೆ. ನಿಜವಾಗಿ ಅವರು ಶೇ 50 ಅನುದಾನ ನೀಡಬೇಕಿತ್ತು ಸಿಟ್ಟು ಹೊರಹಾಕಿದರು.
ಕೇಂದ್ರದ ಅನುದಾನ ಸಮರ್ಪಕವಾಗಿ ಬಂದಿಲ್ಲ. ಆದರೂ ಪ್ರಧಾನಿ ಅವರಿಗೆ ಗೌರವ ಕೊಡುತ್ತಿದ್ದೇವೆ. ಬೆಂಗಳೂರನ್ನ ಬೇರೆ ಥರಾ ನೋಡಬೇಡಿ. ಬೆಂಗಳೂರಿಗೆ ನ್ಯಾಷನಲ್ ಕ್ಯಾಪಿಟಲ್ ₹ 1 ಲಕ್ಷ ಕೋಟಿ ಕೊಡಬೇಕು, ಅಹಮದಾಬಾದ್‌ಗೆ ಹೇಗೆ ಪಾಲು ಕೊಟ್ಟಿದ್ದಾರೆ ಎನ್ನುವುದು ಗೊತ್ತಿದೆ. ನಾನು ರಾಜಕಾರಣ ಮಾಡಲು ಹೋಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ನಮಗೆ ಸೂಕ್ತ ಅನುದಾನವನ್ನು ನೀಡುತ್ತಿಲ್ಲ. ಬೆಂಗಳೂರನ್ನು ನಿರ್ಲಕ್ಷಿಸಲಾಗಿದೆ. ನಗರಕ್ಕೆ ಏನು ಅಗತ್ಯವಿದೆ. ಏನನ್ನೂ ನೀಡಬೇಕು ಎಂಬುದನ್ನು ಪ್ರಧಾನಿಗೆ ಹೇಳುತ್ತೇನೆ ಎಂದರು.