Select Your Language

Notifications

webdunia
webdunia
webdunia
webdunia

ಪೊಲೀಸರನ್ನೇ ಡ್ರಾಪ್ ಕೇಳಿ ಸಿಕ್ಕಿಬಿದ್ದ ಕಳ್ಳರು

ಪೊಲೀಸರನ್ನೇ ಡ್ರಾಪ್ ಕೇಳಿ ಸಿಕ್ಕಿಬಿದ್ದ ಕಳ್ಳರು
bangalore , ಭಾನುವಾರ, 27 ಫೆಬ್ರವರಿ 2022 (18:41 IST)
ದೊಡ್ಡಬಳ್ಳಾಪುರ: ಇನ್ನೇನು ಎಟಿಎಂ ಯಂತ್ರ ಒಡೆದು ಹಣ ಎಗರಿಸಬೇಕೆನ್ನುವಷ್ಟರಲ್ಲಿ ಸಾರ್ವಜನಿಕರ ಕಣ್ಣಿಗೆ ಬಿದ್ದ ಕಳ್ಳರಿಬ್ಬರು ತಕ್ಷಣ ಕಾಲಿಗೆ ಬುದ್ಧಿ ಹೇಳುತ್ತಾರೆ. ಆದರೂ ಜನ ಬೆನ್ನಟ್ಟುತ್ತಾರೆ. ಅವರಿಂದ ತಪ್ಪಿಸಿಕೊಳ್ಳಲು ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರೊಂದಕ್ಕೆ ಕೈಅಡ್ಡಹಾಕಿದ ಕಳ್ಳರು ಡ್ರಾಪ್ ಕೇಳಿದ್ರು.
ಕಾರು ನಿಲ್ಲುತ್ತಿದ್ದಂತೆ ಅದರೊಳಗೆ ಹತ್ತಿ ಅಬ್ಬಾ ಬಚಾವಾದೆವು ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಆ ಕಾರು ನೇರವಾಗಿ ಪೊಲೀಸ್​ ಠಾಣೆ ಮುಂದೆ ನಿಲ್ಲುತ್ತೆ. ಅರೇ ಇದ್ಹೇನಿದು..? ಎಂದು ಕಳ್ಳರು ಪಿಳಿಪಿಳಿ ಕಣ್ಣುಬಿಟ್ಟು ನೋಡುವಷ್ಟರಲ್ಲಿ ಗೊತ್ತಾಗುತ್ತೇ ತಾವು ಡ್ರಾಪ್​ ಕೇಳಿದ್ದು ಪೊಲೀಸರನ್ನೇ..!
ಇದು ಯಾವ ಸಿನಿಮಾ ಕಥೆಯೂ ಅಲ್ಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಮೇಳೆಕೋಟೆಯೊಂದರ ಎಟಿಎಂ ಕೇಂದ್ರದಲ್ಲಿ ಶನಿವಾರ ದರೋಡೆ ಪ್ರಯತ್ನ ನಡೆಸಿದ ಕಳ್ಳರಿಬ್ಬರ ರಿಯಲ್ ಕಥೆ.
ಪ್ರಕರಣ ಸಂಬಂಧ ನೆಲಮಂಗಲ ತಾಲೂಕು ಅರಿಶಿನಕುಂಟೆ ನಿವಾಸಿಗಳಾದ ಸಚಿನ್ ಹಾಗೂ ಗಗನ್ ಎಂಬುವರನ್ನು ಬಂಧಿಸಿರುವ ದೊಡ್ಡಬಳ್ಳಾಪುರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೇಳೆಕೋಟೆ ಎಂಟಿಬಿ ಕೇಂದ್ರ ದರೋಡೆಗೆ ಯತ್ನಿಸಿದ ಕಳ್ಳರಿಬ್ಬರು ಜನರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದರು. ಇದೇ ವೇಳೆ ಮಾಹಿತಿ ಪಡೆದ ಪೊಲೀಸರು ಖಾಸಗಿ ಕಾರಿನಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದರು. ಈ ಬಗ್ಗೆ ಅರಿವೇ ಇಲ್ಲದ ಕಳ್ಳರು ಜನರಿಂದ ತಪ್ಪಿಸಿಕೊಳ್ಳಲು ಪೊಲೀಸರಿದ್ದ ಕಾರಿಗೆ ಕೈ ಅಡ್ಡಹಾಕಿ ಡ್ರಾಪ್​ ಕೇಳಿದ್ದರು. ಕಳ್ಳರನ್ನು ಹಿಡಿಯಲು ಬಂದ ಪೊಲೀಸರಿಗೆ ತುಪ್ಪ ಜಾರಿ ರೊಟ್ಟಿಗೆ ಬಿದ್ದಂತಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿತರ ಸಂಖ್ಯೆಲ್ಲಿ ಭಾರೀ ಕುಸಿತ : ಸಾವಿನ ಸಂಖ್ಯೆಯಲ್ಲೂ ಇಳಿಕೆ