Publish Date: Fri, 04 Oct 2019 (11:26 IST)
Updated Date: Fri, 04 Oct 2019 (11:30 IST)
ಬಾಗಲಕೋಟೆ : ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆ ಕೊಟ್ಟ ತಕ್ಷಣ ಸೂಲಿಬೆಲೆ ದೇಶದ್ರೋಹಿ ಆಗಲು ಸಾಧ್ಯವಿಲ್ಲ ಎಂದು ಪೇಜಾವರ ಶ್ರೀಗಳು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯ ಪರ ಬ್ಯಾಟ್ ಬೀಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಲಿಬೆಲೆ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಯುವಕರನ್ನು ಸೇರಿಸಿ ಉತ್ತಮ ಸಂಘಟನೆ ಮಾಡುತ್ತಿದ್ದಾರೆ. ಸದಾನಂದಗೌಡರು ಕೂಡ ಕೇಂದ್ರ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸದಾನಂದಗೌಡರು ವೈಯಕ್ತಿಕವಾಗಿ ಹೆಸರು ಹೇಳಿ ಹಾಗೆ ಮಾತಾಡಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಶ್ರೀಗಳು, ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ತಿಳಿದಿಲ್ಲ. ಕರ್ನಾಟಕದಲ್ಲಿ ಮಾತ್ರ ಅಲ್ಲ ಮಹಾರಾಷ್ಟ್ರ, ಗುಜರಾತ್, ಬಿಹಾರ ರಾಜ್ಯಗಳಿಗೂ ಪರಿಹಾರ ಕೊಟ್ಟಿಲ್ಲ. ಬಿಹಾರದಲ್ಲಿ ಕೇವಲ ವೀಕ್ಷಣೆ ಮಾಡಿದ್ದಾರೆ. ಎಲ್ಲಿಯೂ ಹಣ ಬಿಡುಗಡೆಯ ಘೋಷಣೆ ಮಾಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.