ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮಡದಿ ಮಕ್ಕಳನ್ನೂ ಸೇರಿದಂತೆ ಇಡೀ ಮನೆಗೆ ಪಾಪಿ ಪತಿ ಬೆಂಕಿ ಹಚ್ಚಿದ ಘಟನೆ ಹಾಸನ ತಾಲ್ಲೂಕಿನ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯೊಳಗಿದ್ದ ಪತ್ನಿ ಹಾಗೂ ಆಕೆಯ ಇಬ್ಬರು ಗಂಡು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ತಾಯಿ ಗೀತಾ ಹಾಗೂ ಆಕೆಯ ಮಕ್ಕಳಾದ ಚಿರಂತನ್, ನಂದನ್ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಜಮೀನು ವಿಚಾರಕ್ಕೆ ಪತಿ ಅಂಕನಹಳ್ಳಿಯ ರಂಗಸ್ವಾಮಿ ಹಾಗೂ ಗೀತಾಳ ನಡುವೆ ಜಗಳವಾಗಿತ್ತು. ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಾಲ್ಕು ತಿಂಗಳಿನಿಂದ ಪತಿಯಿಂದ ಪ್ರತ್ಯೇಕವಾಗಿ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಿದ್ಲು. ರಂಗಸ್ವಾಮಿ ಆಗಾಗ್ಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದ. ನಿನ್ನೆ ಮಕ್ಕಳನ್ನು ನೋಡಲು ಬಂದಿದ್ದಾನೆ. ಇದಕ್ಕೆ ಪತ್ನಿ ಗೀತಾ ವಿರೋಧ ವ್ಯಕ್ತಪಡಿಸಿದ್ದಾಳೆ. ಇದಕ್ಕೆ ಕೋಪಗೊಂಡ ಆತ ಮಧ್ಯರಾತ್ರಿ ಪೆಟ್ರೋಲ್ ತಂದು ಮನೆಗೆ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳೀಯರ ನೆರವಿನಿಂದ ಪ್ರಾಣಾಪಾಯದಿಂದ ಗೀತಾ ಹಾಗೂ ಮಕ್ಕಳು ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಕರಕಲಾಗಿವೆ. ಆರೋಪಿ ರಂಗಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.