ಬೆಂಗಳೂರು: ವಿಶ್ವದ ಅತೀ ದುಬಾರಿ ಬೆಲೆಯ ನಾಯಿಯನ್ನು ಖರೀದಿರಿಸುವುದಾಗಿ ಹೇಳಿಕೊಂಡಿದ್ದ ಶ್ವಾನಪ್ರಿಯ ಸತೀಶ್ ಇಡಿ ದಾಳಿಗೆ ಒಳಗಾಗಿದ್ದು, ಇದೀಗ ತನಿಖೆಯಲ್ಲಿ ಈ ನಾಯಿ ಒಂದು ಲಕ್ಷ ಕೂಡಾ ಬೆಲೆ ಬಾಳಲ್ಲ ಎಂದು ತಿಳಿದುಬಂದಿದೆ.
ಸೆಲೆಬ್ರಿಟಿ ನಾಯಿ ತಳಿಗಾರ ಎಂದು ಖ್ಯಾತಿಗಳಿಸಿದ್ದ ಸತೀಶ್ ಮನೆ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತೀಶ್ ಕಳ್ಳಾಟದ ಒಂದೊಂದೇ ಸತ್ಯಗಳನ್ನು ಬಯಲು ಮಾಡುತ್ತಿದ್ದಾರೆ.
ಸತೀಶ್ ಎಸ್ ಅವರ ಬೆಂಗಳೂರು ನಿವಾಸದ ಮೇಲೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಇಡೀ ಮನೆಯನ್ನು ಶೋಧಿಸಿ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಸತೀಶ್ ತೋಳ ಮತ್ತು ಕಕೇಶಿಯನ್ ಶೆಫರ್ಡ್‌ನ ಅಪರೂಪದ ಮಿಶ್ರತಳಿ ಕ್ಯಾಡಬೊಮ್ಸ್ ಒಕಾಮಿ ಎಂಬ ತಳಿಯನ್ನು ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆಗಳು ಈ ದಾಳಿ ವೇಳೆ ಕಂಡುಬಂದಿಲ್ಲ.
ಈಚೆಗೆ ಸತೀಶ್ ಎಂಬವರು ಅಪರೂಪದ ತಳಿಯ ನಾಯಿಯನ್ನು ಹೊಂದಿದ್ದಾರೆಂದು ವರದಿಯಾಗಿತ್ತು. ನಾಯಿಯೊಂದಿಗೆ ಸತೀಶ್ ಅವರ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿತ್ತು.