ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ, 60 ವರ್ಷ ವಯಸ್ಸಿನ ದಿಲೀಪ್ ಘೋಷ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಪಕ್ಷದ ಸಹೋದ್ಯೋಗಿ ರಿಂಕು ಮಜುಂದಾರ್ ಅವರನ್ನು ಮದುವೆಯಾಗಲಿದ್ದಾರೆ. ಘೋಷ್ಇವರಿಬ್ಬರಿಗೆ 2021ರಿಂದ ಪರಿಚಯವಿದೆ. ಘೋಷ್ ಅವಿವಾಹಿತರು. ಆದರೆ ಮಜುಂದಾರ್ ಅವರಿಗೆ ಇದು ಎರಡನೇ ಮದುವೆಯಾಗಿದೆ. ಆಕೆಗೆ ಒಬ್ಬ ಮಗನಿದ್ದಾನೆ.
ಈ ಜೋಡಿ ನ್ಯೂ ಟೌನ್‌ನಲ್ಲಿ ನಡೆಯುವ ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು, ಸಂಬಂಧಿಕರು ಮಾತ್ರವೇ ಭಾಗವಹಿಸಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ತಮ್ಮ ಹೇಳಿಕೆಗಳಿಂದ ಸದಾ ಸುದ್ದಿಯಾಗುತ್ತಿದ್ದ ಘೋಷ್, ಮೊದಲಿನಿಂದಲೂ ಆರ್‌ಎಸ್‌ಎಸ್ ಸದಸ್ಯರಾಗಿದ್ದಾರೆ. ಬಿಜೆಪಿಯಲ್ಲಿ ಸಕ್ರಿಯರಾಗುವ ಮೊದಲು ದೇಶಾದಾದ್ಯಂತ ಆರ್‌ಎಸ್‌ಎಸ್‌ನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ವೇಳೆ ಸಿಪಿಐ(ಎಂ) ಅನ್ನು ಬದಲಿಸಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಪ್ರಮುಖ ವಿರೋಧ ಪಕ್ಷವನ್ನಾಗಿ ರೂಪಿಸಿದ್ದರು.
ಪಕ್ಷದ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಇಂದು ಬೆಳಿಗ್ಗೆ ನ್ಯೂ ಟೌನ್‌ನಲ್ಲಿರುವ ಘೋಷ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಶುಭ ಹಾರೈಸಿದರು