ಬೆಂಗಳೂರು: ವಾಲ್ಮೀಕಿ ನಿಗಮ ಅವ್ಯವಹಾರದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ನಿಗಮದ ಅಧ್ಯಕ್ಷ ಮತ್ತು ಶಾಸಕರಾಗಿರುವ ಬಸನಗೌಡ ದದ್ದಲ್ ಇಡಿ ಕಣ್ಣಿನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದು ಇಂದು ಬಂಧನವಾಗುವ ನಿರೀಕ್ಷೆಯಿದೆ.
ಮಾಜಿ ಸಚಿವ ನಾಗೇಂದ್ರ ಇದೇ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿದ್ದಾರೆ. ಅವರು ಬಂಧನಕ್ಕೊಳಗಾಗುತ್ತಿದ್ದಂತೇ ಇತ್ತ ಬಸನಗೌಡ ದದ್ದಲ್ಲ ತಲೆಮರೆಸಿಕೊಂಡಿದ್ದರು. ಅವರು ಇಲ್ಲೇ ಕುಟುಂಬದ ಜೊತೆಗೇ ಇದ್ದಾರೆ ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿಕೊಂಡಿದ್ದರು. ಆದರೆ ಇಡಿ ಅಧಿಕಾರಿಗಳ ಕೈಗೆ ಸಿಕ್ಕಿರಲಿಲ್ಲ.
ಈ ನಡುವೆ ರಾಯಚೂರಿನಲ್ಲಿ ತಮ್ಮ ಆಪ್ತನ ಕಾರಿನಲ್ಲಿ ದದ್ದಲ್ ಕದ್ದು ಮುಚ್ಚಿ ಓಡಾಡುತ್ತಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಂದು ಇಡಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಇಲ್ಲವೇ ಸ್ವತಃ ದದ್ದಲ್ಲ ಇಡಿ ವಿಚಾರಣೆಯಿಂದ ಪಾರಾಗಲು ಎಸ್ ಐಟಿ ಮುಂದೆ ಶರಣಾಗುವ ಸಾಧ್ಯತೆಯಿದೆ.
ಈ ಮೊದಲು ನಾಗೇಂದ್ರ ಕೂಡಾ ಇಡಿ ಬೇಡ, ನೀವೇ ಬಂಧಿಸಿ ಎಂದು ರಾಜ್ಯ ಸರ್ಕಾರದ ಅಧೀನಲ್ಲಿ ಬರುವ ಎಸ್ ಐಟಿಗೆ ಬೇಡಿಕೊಂಡಿದ್ದರು. ಇಡಿ ಕೇಂದ್ರ ತನಿಖಾ ಏಜೆನ್ಸಿಯಾಗಿದ್ದು, ಇದರ ಕೈಗೆ ಸಿಕ್ಕಿಬಿದ್ದರೆ ತಮ್ಮ ಪ್ರಭಾವ ಕೆಲಸ ಮಾಡಲ್ಲ ಎನ್ನುವ ಭಯ ಈ ಶಾಸಕರದ್ದು. ಇದೀಗ ದದ್ದಲ್ ಕೂಡಾ ಎಸ್ ಐಟಿ ಮುಂದೆ ಶರಣಾಗುವ ಯೋಜನೆ ಹೊಂದಿದ್ದಾರೆ ಎನ್ನಲಾಗುತ್ತಿದೆ.