ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಭಾನುವಾರದಿಂದ ಜಾತಿ ಸಮೀಕ್ಷೆ ಗಣತಿ ಕೆಲಸ ಆರಂಭವಾಗಿದೆ. ಶಿಕ್ಷಕರು ಬೆಳಗ್ಗಿನಿಂದ ಸಂಜೆಯವರೆಗೆ ಮನೆ ಮನೆಗೆ ತಿರುಗಾಡಿ ಗಣತಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಅಳಲು ಕೇಳುವವರೇ ಇಲ್ಲದಂತಾಗಿದೆ.
ಜಾತಿಗಣತಿ ಮಾಡಲು ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಒಂದು ದಿನಕ್ಕೆ 20 ಮನೆಗೆ ಟಾರ್ಗೆಟ್ ನೀಡಲಾಗಿದೆ. ಆದರೆ ಬಹುತೇಕ ಮನೆಗಳಲ್ಲಿ ಹಗಲು ಹೊತ್ತು ಯಾರೂ ಇರಲ್ಲ. ಹೀಗಾಗಿ ಕತ್ತಲಾದ ಮೇಲೂ ಮನೆ ಮನೆಗೆ ಹೋಗಬೇಕು.
ಇದೀಗ ಜಾತಿ ಗಣತಿಗಾಗಿ ಸರ್ಕಾರೀ ಶಾಲೆಗಳನ್ನು ಅಕ್ಟೋಬರ್ 18 ರವರೆಗೆ ಬಂದ್ ಮಾಡಲಾಗಿದೆ. ಹೀಗಾಗಿ ಶಿಕ್ಷಕರಿಗೆ ಫುಲ್ ಟೈಂ ತಿರುಗಾಡುವುದೇ ಕೆಲಸ. ಅದರಲ್ಲೂ ಕೆಲವು ಮನೆಗಳಲ್ಲಿ ಮನೆಯೊಳಗೇ ಬಿಟ್ಕೊಳ್ಳಲ್ಲ. ಬಾಗಿಲ ಮುಂದೆ ಬಂದರೂ ಇಲ್ಲಿಂದ ಹೋಗಿ ಎಂದು ತೀರಾ ಅವಮಾನ ಮಾಡುತ್ತಾರೆ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಇದು ಬಹುತೇಕರಿಗೆ ಆಗುತ್ತಿರುವ ಅನುಭವ.
ಕೆಲವರು ನಾವು ಶಿಕ್ಷಕರು ಎಂದು ಐಡಿ ಕಾರ್ಡ್ ತೋರಿಸಿದ್ರೂ ನಂಬಲ್ಲ. ಬಾಯಿಗೆ ಬಂದ ಹಾಗೆ ಮಾತನಾಡಿ ಅವಮಾನ ಮಾಡುತ್ತಾರೆ ಎಂದು ಗಣತಿಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರೊಬ್ಬರು ಹೇಳುತ್ತಾರೆ. ಒಂದು ದಿನಕ್ಕೆ ಕನಿಷ್ಠ 20 ಮನೆ ಆಗಬೇಕು ಅಂತಾರೆ. ಕೆಲವರು ಸರಿಯಾಗಿ ಮಾಹಿತಿ ಕೊಡುತ್ತಾರೆ ಮತ್ತೆ ಕೆಲವರು ಕೊಡಲ್ಲ. ಒಂದು ಮನೆ ಸಮೀಕ್ಷೆ ನಡೆಸಲು ಅರ್ಧಗಂಟೆ ಬೇಕಾಗುತ್ತದೆ. ಕುಟುಂಬದ ಎಲ್ಲಾ ಸದಸ್ಯರಿಗೆ ಸಂಬಂಧಪಟ್ಟಂತೆ ಸುಮಾರು 40 ಪ್ರಶ್ನೆಗಳ ಉತ್ತರ ತುಂಬಬೇಕು. ಇದಕ್ಕೆಲ್ಲಾ ಸಮಯ ಹಿಡಿಯುತ್ತದೆ ಎನ್ನುವುದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರ ಅನುಭವದ ಮಾತು.
ಹಳ್ಳಿಗಳಲ್ಲಿ ಕನಿಷ್ಠ ಶಿಕ್ಷಕರು ಎನ್ನುವುದಕ್ಕಾದರೂ ಗೌರವ ಕೊಡುತ್ತಾರೆ. ಆದರೆ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಮನೆಗಳೂ ಹೆಚ್ಚು, ಇಲ್ಲಿನ ಯಾರನ್ನೂ ನಂಬುವುದಿಲ್ಲ. ಹೀಗಾಗಿ ಗಣತಿ ಮಾಡುವುದು ಕಷ್ಟ ಎನ್ನುವುದು ಸಮೀಕ್ಷಕರ ಅಳಲು.