ಬೆಂಗಳೂರು: ಬಿಜೆಪಿಯಲ್ಲಿ ಬಿವೈ ವಿಜಯೇಂದ್ರ ಹಾಗೂ ಯತ್ನಾಳ್ ನಡುವಿನ ಬಣ ಬಡಿದಾಟ ತಾರಕಕ್ಕೇರಿದ್ದು, ಇದೀಗ ವಕ್ಫ್ ವಿಚಾರವಾಗಿ ಕೆಲ ಬಿಜೆಪಿ ನಾಯಕರ ಗುಂಪು ಪ್ರತ್ಯೇಕ ಹೋರಾಟ ನಡೆಸುತ್ತಿದೆ.
ಈ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು, ಹೋರಾಟ ಕೈಬಿಟ್ಟು ಪಕ್ಷ ಬಲಪಡಿಸಲು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಮಂಗಳವಾರ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯ ಸೋಲಿನಿಂದ ನಿರೀಕ್ಷೆ ಮೀರಿ ಹಿನ್ನಡೆಯಾಗಿದೆ. ಪಕ್ಷದ ಸೋಲಿನ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಯತ್ನಾಳ್‌ಗೆ ಸಲಹೆ ನೀಡಿದರು.
ಪ್ರತ್ಯೇಕವಾಗಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ನಮ್ಮೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಇತರರಿಗೆ ಮನವಿ ಮಾಡಿದ್ದಾರೆ. ಹೀಗಿದ್ದರೂ ಅವರು ತಮ್ಮ ಸ್ವಾಭಿಮಾನದಿಂದ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಯಡಿಯೂರಪ್ಪ ಅವರು ಅಸಮಾಧಾನ ಹೊರಹಾಕಿದರು.