ಮೈಸೂರು: ಈ ಪಾದಯಾತ್ರೆ ನಿಮ್ಮನ್ನು ಮನೆಗೆ ಕಳುಹಿಸುವರೆಗೂ ನಿಲ್ಲದು. 82 ವರ್ಷ ಆಗಿದ್ದರೂ ರಾಜ್ಯದ ಉದ್ದಗಲ ಓಡಾಡಿ ನಿಮ್ಮನ್ನು ಮನೆಗೆ ಕಳಿಸುವ ಕೆಲಸ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಗುಡುಗಿದರು.
ಮೈಸೂರು ಚಲೋ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದಿವಾಳಿಯಾಗಿರುವ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ತಾನು ಕಲ್ಲು ಬಂಡೆ ಎನ್ನುತ್ತಿರುವ ಡಿಕೆ ಶಿವಕುಮಾರ್ ಅವರು ವಿಜಯೇಂದ್ರ, ಅಶೋಕರನ್ನು ಏಕವಚನದಲ್ಲಿ ಕರೆಯುತ್ತಾರೆ. ನಿಮ್ಮ ಪಾಪದ ಕೊಡ ತುಂಬಿ ತುಳುಕುತ್ತಿದ್ದು, ಯಾವಾಗ ಏನ್ ಆಗ್ಬೋದು ಎಂದು ಹೇಳಕ್ಕಾಗಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದಿನ ಯಾವ ಮುಖ್ಯಮಂತ್ರಿ ಕೂಡ ತನ್ನ ಕುಟುಂಬಕ್ಕೆ ನಿವೇಶನ ಕೊಟ್ಟಿಲ್ಲ. ಇದು ಯಾರ ಅಪ್ಪನ ಮನೆ ದುಡ್ಡು? ಇಷ್ಟಾದರೂ ಪ್ರಾಮಾಣಿಕ ಎನ್ನುತ್ತೀರಿ. ಇಂತಹ ಸಿ.ಎಂ. ಡಿಸಿಎಂ ರಾಜ್ಯದಲ್ಲಿ ಇರುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ. ಶೀಘ್ರದಲ್ಲೇ ನಿಮ್ಮನ್ನು ರಾಜ್ಯದ ಜನ ಮನೆಗೆ ಕಳುಹಿಸುತ್ತಾರೆ. ಈಗ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿ 130- 140 ಸ್ಥಾನ ಗೆಲ್ಲಲಿದೆ ಎಂದು ನುಡಿದರು.