ನವದೆಹಲಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬಗ್ಗೆ ಈಗ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಯಡಿಯೂರಪ್ಪ ವಿರುದ್ಧದ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ. ಇದು ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದಂತಾಗಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ. ಜೈಸಿಂಗ್ ಜೊಯ್ ಮಾಲ್ಯ ಅವರನ್ನೊಳಗೊಂಡ ಪೀಠ ತಡೆ ನೀಡಿದೆ.
ಯಡಿಯೂರಪ್ಪ ತಮ್ಮ ವಿರುದ್ದ ದಾಖಲಾದ ಪ್ರಕರಣ ರದ್ದುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ ನವಂಬರ್ 13 ರಂದು ಹೈಕೋರ್ಟ್ ರದ್ದುಗೊಳಿಸಲು ನಿರಾಕರಿಸಿತ್ತು. ಇದರ ವಿರುದ್ಧ ಯಡಿಯೂರಪ್ಪ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಯಡಿಯೂರಪ್ಪ ಪರ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ವಾದ ಮಂಡಿಸಿದ್ದಾರೆ. ಯಡಿಯೂರಪ್ಪ ಪರ ರಾಜಕೀಯ ಪ್ರೇರಿತ ಪ್ರಕರಣ ಇದಾಗಿದೆ. ಯಡಿಯೂರಪ್ಪ ಅರ್ಜಿಯನ್ನು ಅರ್ಹತೆ ಆಧಾರದಲ್ಲಿ ಪರಿಗಣಿಸಲಾಗಿಲ್ಲ. ಅವರು 88 ವರ್ಷದ ಹಿರಿಯ ವ್ಯಕ್ತಿ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು ಎಂದಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಸಹಾಯ ಕೇಳಿಕೊಂಡು ಬಂದಿದ್ದ 17 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರ ತಾಯಿ ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಸಿಐಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.