ಬೆಂಗಳೂರು: ಸದ್ಯ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷೀಯ ಪಟ್ಟಕ್ಕೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕಾರ್ಕಳ ಶಾಸಕ ಮಾಜಿ ಸಚಿವ ವಿ. ಸುನೀಲ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಪಕ್ಷದ ಹುದ್ದೆಯಿಂದ ತಮ್ಮನ್ನು ಬಿಡುಗಡೆಗೊಳಿಸಲು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನಾ ಮೌಖಿಕವಾಗಿ ಅವರು ಕೋರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವೈಯಕ್ತಿಕ ಕಾರಣಕ್ಕೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಬೇಕು ಎಂದು ತಿಳಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಾಮಾನ್ಯವಾಗಿ ನಾಲ್ವರು ಪ್ರಮುಖರನ್ನು ಮಾತ್ರ ನಿಯೋಜನೆ ಮಾಡಲಾಗುತ್ತದೆ. ಸದ್ಯ ಸುನೀಲ್ ಕುಮಾರ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡ ಹಾಗೂ ಪಿ.ರಾಜೀವ್ ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಸುನೀಲ್ ಕುಮಾರ್ ಹಾಗೂ ವಿಜಯೇಂದ್ರ ನಡುವೆ ಯಾವುದೇ ರೀತಿಯ ಭಿನ್ನಭಿಪ್ರಾಯವಿಲ್ಲದ ತಟಸ್ಥ ಸಂಬಂಧವಿದೆ.
ಸುನೀಲ್ ಕುಮಾರ್ ಅವರು ಬಿವೈ ವಿಜಯೇಂದ್ರ ಜತೆ ಯಾವುದೇ ವಿವಾದ ಇಲ್ಲದೆ ಕಾರ್ಯನಿರ್ವಹಿಸಿದ್ದರು. ಇನ್ನೂ ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟದಲ್ಲೂ ಸುನೀಲ್ ಕುಮಾರ್ ಅವರು ಗುರುತಿಸಿಕೊಂಡಿಲ್ಲ. ಆದರೆ ಇದೀಗ ತಮ್ಮನ್ನು ಪ್ರ‍್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿರುವುದು ಕೂತುಹಲ ಮೂಡಿಸಿದೆ.
ಸದ್ಯ ಈ ಕುರಿತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ವಿಜಯೇಂದ್ರ ಮಾಹಿತಿ ನೀಡಿದ್ದು, ಈ ಸಂಬಂಧ ಪಕ್ಷ ಯಾವುದೇ ರೀತಿಯ ನಿರ್ಧಾರವನ್ನು ಕೈಗೊಂಡಿಲ್ಲ.<>